ಮಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರವನ್ನು ಖಂಡಿಸಿ, ಬಿಜೆಪಿ ಮಂಗಳೂರು ಮಂಡಲದ ವತಿಯಿಂದ ತೊಕ್ಕೊಟ್ಟುವಿನಲ್ಲಿ ಬುಧವಾರ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮಂಗಳೂರು ಮಂಡಲ ಪ್ರಧಾನ ಕಾರ್ಯದರ್ಶಿ ಕೆ.ಆರ್. ಮೋಹನ್ ರಾಜ್, ವಾಲ್ಮೀಕಿ ನಿಗಮದ ಸುಮಾರು 89.63 ಕೋಟಿ ರೂಪಾಯಿ ಹಣವನ್ನು ಸ್ವಂತ ಖಾತೆಗೆ ಅಕ್ರಮವಾಗಿ ವರ್ಗಾಯಿಸಿದ ಗಂಭೀರ ಆರೋಪದ ಮೇಲೆ ನಾಗೇಂದ್ರ ಅವರು ಬಂಧನಕ್ಕೊಳಗಾಗಿದ್ದರು. ಸದ್ಯ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿದ್ದು, ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಇಂತಹ ಕಳಂಕಿತ ಶಾಸಕರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ಸರ್ಕಾರಕ್ಕೆ ಶೋಭೆಯಲ್ಲ ಎಂದು ಕಿಡಿಕಾರಿದರು.
"ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ಮಾತು ಕೊಟ್ಟು ಜನರಿಂದ ಮತ ಪಡೆದ ಕಾಂಗ್ರೆಸ್, ಈಗ ಹಗರಣದಲ್ಲಿ ಭಾಗಿಯಾದವರನ್ನೇ ಸಮರ್ಥಿಸಿಕೊಳ್ಳುತ್ತಿದೆ. ಆರೋಪಿಗಳಿಗೆ ಪುನಃ ಸಚಿವ ಸ್ಥಾನ ಕೊಡುವ ಮೂಲಕ ರಾಜ್ಯ ಸರ್ಕಾರವೇ ಭ್ರಷ್ಟಾಚಾರಕ್ಕೆ ನೇರ ಬೆಂಬಲ ನೀಡುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ" ಎಂದು ಅವರು ವಾಗ್ದಾಳಿ ನಡೆಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಜಯರಾಮ್ ಶೆಟ್ಟಿ, ನಿಗಮದ ಹಣ ಲೂಟಿ ಮಾಡಿದ ಕಳಂಕ ಹೊತ್ತಿರುವ ಬಿ. ನಾಗೇಂದ್ರ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಅವರ ಸ್ಥಾನಕ್ಕೆ ಬೇರೆ ಹೊಸಬರಿಗೆ ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಪ್ರಮುಖ ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಧನಲಕ್ಷ್ಮಿ ಗಟ್ಟಿ, ಜಿ. ದಯಾನಂದ್ ತೊಕ್ಕೊಟ್ಟು, ರವಿಶಂಕರ್ ಸೋಮೇಶ್ವರ, ಜೀವನ್ ಕುಮಾರ್, ಪೂಜಾ ಪೈ, ದಿವ್ಯ ಸತೀಶ್, ಹೇಮಂತ್ ಶೆಟ್ಟಿ, ಮನೋಜ್ ಆಚಾರ್ಯ, ಸುಮನ ಮನೋಜ್ ಶೆಟ್ಟಿ, ಪುರುಷೋತ್ತಮ ಗಟ್ಟಿ, ನಿತ್ಯಾನಂದ ಭಂಡಾರಿ ಹಾಗೂ ಶೈಲೇಶ್ ಶೆಟ್ಟಿ ತಲಪಾಡಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

