ಬೆಳ್ತಂಗಡಿ: 'ಉತ್ತಮ ಶಾಸಕ' ಗೌರವಕ್ಕೆ ಭಾಜನರಾಗಿರುವ ಬೆಳ್ತಂಗಡಿ ಕ್ಷೇತ್ರದ ಜನಪ್ರಿಯ ಶಾಸಕ ಹರೀಶ್ ಪೂಂಜಾ ಅವರಿಗೆ ತಾಲೂಕಿನ ಒಕ್ಕಲಿಗ ಸಮುದಾಯದ ವತಿಯಿಂದ ಆತ್ಮೀಯ ಗೌರವಾಭಿನಂದನೆ ಸಲ್ಲಿಸಲಾಯಿತು.
ಸಮುದಾಯದ ನೂರಾರು ಸಂಖ್ಯೆಯ ಮುಖಂಡರು ಹಾಗೂ ಬಂಧುಗಳು ಶಾಸಕರ ನಿವಾಸ 'ಮಿಥಿಲಾ'ಗೆ ಆಗಮಿಸಿ, ಫಲ-ತಾಂಬೂಲ ನೀಡಿ ಗೌರವಿಸಿದರು.
ಕಳೆದ ಎಂಟು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರದಿಂದ ಶ್ರಮಿಸಿ ಅನುದಾನ ತರುವಲ್ಲಿ ಪೂಂಜಾ ಅವರ ಪಾತ್ರ ಹಿರಿದಾದುದು. ಪಶ್ಚಿಮ ಮಲೆನಾಡು ಭಾಗದ ಪ್ರಮುಖ ಕ್ಷೇತ್ರವಾದ ಬೆಳ್ತಂಗಡಿಯನ್ನು ಮಾದರಿ ತಾಲೂಕಾಗಿ ಪರಿವರ್ತಿಸಲು ಅವರು ಶ್ರಮಿಸುತ್ತಿದ್ದಾರೆ. ಸರ್ವ ಧರ್ಮ ಮತ್ತು ಸಮುದಾಯಗಳನ್ನು ಸಮಾನತೆಯಿಂದ ಕಾಣುವ ಜತೆಗೆ, ಹಿಂದೂ ಸಮಾಜದ ಒಗ್ಗಟ್ಟು ಹಾಗೂ ಒಕ್ಕಲಿಗ ಸಮುದಾಯದ ಶ್ರೇಯಸ್ಸಿಗೆ ಅವರು ನೀಡಿರುವ ಕೊಡುಗೆ ಶ್ಲಾಘನೀಯ ಎಂದು ಸಮುದಾಯದ ಪ್ರಮುಖರು ಈ ಸಂದರ್ಭದಲ್ಲಿ ಬಣ್ಣಿಸಿದರು.
ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ವಿಕಾಸ ಪಥದ ಕೆಲಸಗಳಿಗೆ ಒಕ್ಕಲಿಗ ಸಮುದಾಯದ ಸಂಪೂರ್ಣ ಬೆಂಬಲ ಸದಾ ಇರಲಿದೆ. ಮುಂದಿನ ದಿನಗಳಲ್ಲಿ ಶಾಸಕರಿಗೆ ರಾಜಕೀಯವಾಗಿ ಇನ್ನು ಹೆಚ್ಚಿನ ಉನ್ನತ ಹುದ್ದೆ ಹಾಗೂ ಗೌರವಗಳು ಲಭಿಸಲಿ ಎಂದು ಶ್ರೀ ಕಾಲಭೈರವೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸುವುದಾಗಿ ಶುಭ ಹಾರೈಸಿದರು.
ಸಹಕಾರದ ಭರವಸೆ ನೀಡಿದ ಶಾಸಕರು:
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ, "ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯ ಜತೆಗೆ ಒಕ್ಕಲಿಗ ಸಮುದಾಯದ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ ಅಗತ್ಯ ಸಹಕಾರ ಸದಾ ಸಿಗಲಿದೆ," ಎಂದು ಭರವಸೆ ನೀಡಿ, ತಮಗೆ ಗೌರವ ಸಲ್ಲಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ತಾಲೂಕು ಮಟ್ಟದ ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.
