ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಮಾಸಿಕ ಸಭೆ ಹಾಗೂ 'ಆಟಿಡ್ ಒಂಜಿ ವಿಶೇಷ ತಿನಸ್' ಕಾರ್ಯಕ್ರಮವನ್ನು ಇತ್ತೀಚೆಗೆ ಯಶಸ್ವಿಯಾಗಿ ಆಯೋಜಿಸಲಾಯಿತು.
ಆಟಿ ತಿಂಗಳ ವಿಶೇಷತೆಯ ಭಾಗವಾಗಿ ಮೋರ್ಚಾದ ಸದಸ್ಯರು ತಮ್ಮ ಮನೆಗಳಿಂದ ಸಿದ್ಧಪಡಿಸಿ ತಂದಿದ್ದ ಸುಮಾರು 25ಕ್ಕೂ ಹೆಚ್ಚು ವಿವಿಧ ಬಗೆಯ ತುಳುನಾಡಿನ ಸಾಂಪ್ರದಾಯಿಕ ಖಾದ್ಯಗಳನ್ನು ಎಲ್ಲರೂ ಒಟ್ಟಾಗಿ ಹಂಚಿಕೊಂಡು ಸವಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಹಾಗೂ ಬೆಳ್ತಂಗಡಿ ಮಂಡಲ ಪ್ರಭಾರಿ ಕಮಲಾಕ್ಷಿ, "ಆಟಿ ತಿಂಗಳ ಆಚರಣೆಯ ಹಿಂದೆ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಿದೆ. ನಮ್ಮ ಹಿರಿಯರು ಬಳುವಳಿಯಾಗಿ ನೀಡಿದ ಈ ವಿಶಿಷ್ಟ ಪರಂಪರೆ ಮತ್ತು ಆಹಾರ ಪದ್ಧತಿಯನ್ನು ಮುಂಬರುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಜಾಗೃತಿ ಮೂಡಿಸಬೇಕು" ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ವಸಂತಿ ಮಚ್ಚಿನ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಕಿತ ಶೆಟ್ಟಿ, ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಜಿಲ್ಲಾ ಕಾರ್ಯದರ್ಶಿ ಅಮಿತಾ ಕುಶಾಲಪ್ಪ ಗೌಡ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪೂರ್ಣಿಮಾ ಜಯಂತ್ ಹಾಗೂ ತುಳಸಿ ಉಮೇಶ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಶ್ರೀಮತಿ ಶಾರದಾ ಸ್ವಾಗತಿಸಿದರೆ, ಶ್ರೀಮತಿ ತುಳಸಿ ಕಾರ್ಯಕ್ರಮ ನಿರೂಪಿಸಿದರು. ಮಂಜುಳಾ ನಡ ವಂದಿಸಿದರು.


