ನವದೆಹಲಿ: ತನಗೆ ಗೆಳೆತನ ಬೆಳೆಸಲು ಇಷ್ಟವಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದ್ದ 21 ವರ್ಷದ ಯುವತಿಯೊಬ್ಬಳನ್ನು ಜಿಮ್ ಟ್ರೇನರ್ ಮನೆಗೆ ನುಗ್ಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಜಧಾನಿ ದೆಹಲಿಯ ತಿಲಕ್ ನಗರದಲ್ಲಿ ಬೆಳಕಿಗೆ ಬಂದಿದೆ.
ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಮುಸ್ಕಾನ್ (21) ಕೊಲೆಯಾದ ಯುವತಿ. ಈ ಕೃತ್ಯ ಎಸಗಿದ ಆರೋಪಿಯನ್ನು ಇಮ್ರಾನ್ ಎಂದು ಗುರುತಿಸಲಾಗಿದ್ದು, ಈತ ವೃತ್ತಿಯಲ್ಲಿ ಜಿಮ್ ಟ್ರೇನರ್ ಆಗಿದ್ದಾನೆ. ಕೃತ್ಯ ಎಸಗಿದ ಬಳಿಕ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದು, ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ.
ಘಟನೆಯ ವಿವರ:
ಪೊಲೀಸ್ ಮೂಲಗಳ ಪ್ರಕಾರ, ಯುವತಿ ಜಿಮ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆರೋಪಿ ಇಮ್ರಾನ್ ಪರಿಚಯವಾಗಿದ್ದ. ಕಳೆದ ಕೆಲವು ಸಮಯದಿಂದ ಆಕೆಯೊಂದಿಗೆ ನಿಕಟ ಸ್ನೇಹ ಬೆಳೆಸಲು ಈತ ನಿರಂತರವಾಗಿ ಯತ್ನಿಸುತ್ತಿದ್ದ. ಆದರೆ ಯುವತಿ ಆತನ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ಇದರಿಂದ ಆಕ್ರೋಶಗೊಂಡಿದ್ದ ಇಮ್ರಾನ್, ಘಟನೆ ನಡೆದ ದಿನ ಯುವತಿ ಮನೆಯಲ್ಲಿ ಒಬ್ಬಂಟಿಯಾಗಿದ್ದನ್ನು ಖಚಿತಪಡಿಸಿಕೊಂಡು ಏಕಾಏಕಿ ಮನೆಗೆ ನುಗ್ಗಿ ಈ ಭೀಕರ ಕೃತ್ಯ ಎಸಗಿದ್ದಾನೆ.
ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿರುವ ತಿಲಕ್ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಬಂಧನಕ್ಕಾಗಿ ಜಾಲ ಬೀಸಿರುವ ಪೊಲೀಸರು, ಕೃತ್ಯ ನಡೆದ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ತನಿಖೆಗೆ ಒಳಪಡಿಸಿದ್ದಾರೆ.
ಕೊಲೆಗೆ ಸಂಬಂಧಿಸಿದಂತೆ ಎಲ್ಲಾ ಕೋನಗಳಿಂದ ತನಿಖೆ ಮುಂದುವರಿದಿದ್ದು, ಆರೋಪಿ ಸಿಕ್ಕಿಬಿದ್ದ ಬಳಿಕವೇ ಕೃತ್ಯಕ್ಕೆ ಸಂಬಂಧಿಸಿದ ಪೂರ್ಣ ಮಾಹಿತಿ ಹಾಗೂ ನಿಖರ ಕಾರಣ ಹೊರಬರಬೇಕಿದೆ.
