ದಕ್ಷಿಣ ಕನ್ನಡ

ಬೆಳ್ತಂಗಡಿ: ನಂದಗೋಕುಲ ಗೋಶಾಲೆಗೆ ಭಜನಾ ಪರಿಷತ್ತಿನಿಂದ ಮೇವು, ಹಿಂಡಿ ಸಮರ್ಪಣೆ; ಸಮಾಜಮುಖಿ ಕಾರ್ಯಕ್ಕೆ ಶ್ಲಾಘನೆ



ಬೆಳ್ತಂಗಡಿ: ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಬೆಳ್ತಂಗಡಿ ತಾಲೂಕು ಹಾಗೂ ವಿವಿಧ ವಲಯ ಸಮಿತಿಗಳ ಪದಾಧಿಕಾರಿಗಳ ಒಕ್ಕೂಟದ ವತಿಯಿಂದ ಕಳೆಂಜ ಬಂಡೇರಿಯ ನಂದಗೋಕುಲ ಗೋಶಾಲೆಗೆ ಸುಮಾರು ಮೂರು ಪಿಕಪ್ ಲೋಡ್ ಹಸಿರು ಮೇವು ಹಾಗೂ 350 ಕೆ.ಜಿ. ಹಿಂಡಿಯನ್ನು ಭಾನುವಾರ ಸಮರ್ಪಿಸಲಾಯಿತು.

​ಆಹಾರ ಧಾನ್ಯ ಹಾಗೂ ಮೇವಿನೊಂದಿಗೆ ಆಗಮಿಸಿದ ಭಜನಾ ಪರಿಷತ್ತಿನ ಪದಾಧಿಕಾರಿಗಳನ್ನು ನಂದಗೋಕುಲ ಗೋಶಾಲೆಯ ಅಧ್ಯಕ್ಷ ನಾರಾಯಣಗೌಡ ಕೋಳಂಬೆ, ಉಪಾಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಕಾರ್ಯದರ್ಶಿ ನವೀನ್ ನೆರಿಯ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಕಲ್ಕಟ್ಟ, ಕಾರ್ಯದರ್ಶಿ ದಾಮೋದರ ಗೌಡ ಪುದುವೆಟ್ಟು ಹಾಗೂ ಸದಸ್ಯರು ಭಕ್ತಿಯಿಂದ ಸ್ವಾಗತಿಸಿದರು.

​ಜನಪರ ಸೇವೆಯೇ ಭಜನೆಯ ಮೂಲ ಉದ್ದೇಶ:

ಕಾರ್ಯಕ್ರಮದ ನೇತೃತ್ವವನ್ನು ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ. ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು, ತಾಲೂಕು ಅಧ್ಯಕ್ಷ ರವಿರಾಜ್ ಚಾರ್ಮಾಡಿ, ಗೌರವಾಧ್ಯಕ್ಷ ವೆಂಕಟೇಶ್ ಭಟ್ ಕಜೆ ಹಾಗೂ ಸಲಹೆಗಾರ ನಾಗೇಶ್ ನೆರಿಯ ವಹಿಸಿದ್ದರು.

​ಈ ಸಂದರ್ಭದಲ್ಲಿ ಮಾತನಾಡಿದ ಗೋಶಾಲೆಯ ಕಾರ್ಯದರ್ಶಿ ನವೀನ್ ನೆರಿಯ, "ಮಂಜುನಾಥೇಶ್ವರ ಭಜನಾ ಪರಿಷತ್ತು ಬೆಳ್ತಂಗಡಿ ಮತ್ತು ವಲಯ ಸಮಿತಿಗಳ ಪದಾಧಿಕಾರಿಗಳು ಹಾಗೂ ಸಮಸ್ತ ಭಜಕರು ಗೋವುಗಳ ಪಾಲನೆಗೆ ಕೈಜೋಡಿಸಿರುವುದು ಅತ್ಯಂತ ಶ್ಲಾಘನೀಯ. ಭಜನೆ ಮತ್ತು ಭಕ್ತಿಯೊಂದಿಗೆ ಸಮಾಜಮುಖಿ ಚಿಂತನೆ ಬೆಳೆಸಿಕೊಂಡು ಗೋಶಾಲೆಯ ಗೋವುಗಳಿಗೆ ನೆರವಾಗುವ ಮೂಲಕ ಇಡೀ ಸಮಾಜಕ್ಕೇ ಮಾದರಿ ಸಂದೇಶ ನೀಡಿದ್ದಾರೆ," ಎಂದು ಕೃತಜ್ಞತೆ ಸಲ್ಲಿಸಿದರು.

​ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಕೇವಲ ಭಜನಾ ಸಂಕೀರ್ತನೆಗಳಿಗೆ ಸೀಮಿತವಾಗದೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಹತ್ತಾರು ಸಾಮಾಜಿಕ, ಜನಪರ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

​ಉಪಸ್ಥಿತಿ:

ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷರಾದ ಕೃಷ್ಣಪ್ಪಗೌಡ, ಪ್ರತಿಮ, ಹರೀಶ್ ಕಳೆಂಜ, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ನೀತ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

​


ಅಲ್ಲದೆ, ಮತ್ತೂರು ಶ್ರೀ ಪಂಚಲಿಂಗೇಶ್ವರ ಮಕ್ಕಳ ಭಜನಾ ಮಂಡಳಿಯ ಅಧ್ಯಕ್ಷೆ ಕೇಶವತಿ, ಸಹ ಸಂಚಾಲಕಿ ಚೇತನ ಅಶೋಕ್, ಶ್ರೀ ವೈದ್ಯನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ದೀಕ್ಷಿತ್, ಕಾರ್ಯದರ್ಶಿ ಶಶಿಧರ ಸೇರಿದಂತೆ ತಾಲೂಕಿನ ನೂರಾರು ಭಜಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



image