ದೇಶ

ತೆಲಂಗಾಣ : ಶೌಚಾಲಯ ಸ್ವಚ್ಛಗೊಳಿಸಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ತೆಲಂಗಾಣ ಸಚಿವ ಜುಪಲ್ಲಿ ಕೃಷ್ಣರಾವ್



ನಾಗರಕರ್ನೂಲ್:

​ಸರ್ಕಾರಿ ಕಚೇರಿಯಲ್ಲಿ ನಿರ್ವಹಣೆಯಿಲ್ಲದೆ ನಾರುತ್ತಿದ್ದ ಶೌಚಾಲಯವನ್ನು ಸ್ವತಃ ಸಚಿವರೊಬ್ಬರು ಕ್ಲೀನ್ ಮಾಡುವ ಮೂಲಕ ನಿಷ್ಕಲಂಶತೆಯನ್ನು ಮೆರೆದ ಅಪರೂಪದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.

​ತೆಲಂಗಾಣದ ಅಬಕಾರಿ ಹಾಗೂ ಪ್ರವಾಸೋದ್ಯಮ ಸಚಿವ ಜುಪಲ್ಲಿ ಕೃಷ್ಣರಾವ್ ಅವರು ನಾಗರಕರ್ನೂಲ್ ಜಿಲ್ಲೆಯ ಪೆಂಟ್ಲವೆಲ್ಲಿ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು. ಈ ವೇಳೆ ಕಚೇರಿಯ ಆವರಣ ಹಾಗೂ ಸಾರ್ವಜನಿಕ ಶೌಚಾಲಯಗಳು ಅತ್ಯಂತ ಕೊಳಕಾಗಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

​ಕೂಡಲೇ ನೀರು ಮತ್ತು ಪೈಪ್ ಪಡೆದುಕೊಂಡ ಸಚಿವರು, ಸ್ವತಃ ತಾವೇ ನಿಂತು ಶೌಚಾಲಯವನ್ನು ತೊಳೆದು ಸ್ವಚ್ಛಗೊಳಿಸಿದರು. ಸಚಿವರ ಈ ನಡೆ ಕಂಡು ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ಷಣಕಾಲ ದಿಗ್ಭ್ರಮೆಗೊಂಡರು.

​


 ಬಳಿಕ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಚಿವ ಜುಪಲ್ಲಿ ಕೃಷ್ಣರಾವ್, "ಸಾರ್ವಜನಿಕರು ಪ್ರತಿದಿನ ಬಂದು ಹೋಗುವ ಸರ್ಕಾರಿ ಕಚೇರಿಗಳಲ್ಲಿ ಮೂಲಭೂತ ನೈರ್ಮಲ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಸಿಬ್ಬಂದಿಯ ಜವಾಬ್ದಾರಿ. ಸ್ವಚ್ಛತೆ ಕಾಪಾಡಲು ಸಾಧ್ಯವಾಗದಿದ್ದರೆ ಸಾರ್ವಜನಿಕ ಸೇವೆಯನ್ನು ಹೇಗೆ ಮಾಡುತ್ತೀರಾ?" ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

​ಅಲ್ಲದೆ, ಮುಂದಿನ ದಿನಗಳಲ್ಲಿ ಕಚೇರಿ ನೈರ್ಮಲ್ಯ ಹಾಗೂ ಕಾರ್ಯವೈಖರಿಯಲ್ಲಿ ಲೋಪದೋಷಗಳು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಸಚಿವರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.



image