ಉಪ್ಪಿನಂಗಡಿ: ಕರಾವಳಿಯಲ್ಲಿ ಮಳೆಯಾರ್ಭಟ ಮುಂದುವರಿದಿದ್ದು, ಪ್ರಸಿದ್ಧ ಉಪ್ಪಿನಂಗಡಿಯ ಸಂಗಮ ಕ್ಷೇತ್ರದಲ್ಲಿ ಹರಿಯುವ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಶನಿವಾರ ಸಂಜೆ ವೇಳೆಗೆ ಎರಡೂ ನದಿಗಳಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ. ಪ್ರಸ್ತುತ ನದಿ ನೀರು ಅಪಾಯದ ಮಟ್ಟದ ಅಂಚನ್ನು ತಲುಪಿದೆ.
ಸ್ಥಳಕ್ಕೆ ಎಸಿ ಸ್ಟೆಲ್ಲಾ ವರ್ಗೀಸ್ ಭೇಟಿ; ಪರಿಸ್ಥಿತಿ ಪರಿಶೀಲನೆ
ನದಿಯಲ್ಲಿ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪುತ್ತೂರು ಉಪವಿಭಾಗಾಧಿಕಾರಿ (ಎಸಿ) ಸ್ಟೆಲ್ಲಾ ವರ್ಗೀಸ್ ಅವರು ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಇಒ ನವೀನ್ ಭಂಡಾರಿ, ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಸುತೇಶ ಕೆ.ಪಿ. ಹಾಗೂ ಅವರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಅಲ್ಲದೆ, ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರಾದ ವೆಂಕಪ್ಪ ಪೂಜಾರಿ, ವೆಂಕಟೇಶ್ ಭಟ್, ಪಂಚಾಯತ್ ಮಾಜಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಸೇರಿದಂತೆ ಸ್ಥಳೀಯ ಪಂಚಾಯತ್ ಅಧಿಕಾರಿಗಳು ಭಾಗವಹಿಸಿದ್ದರು.
ತ್ವರಿತ ಕ್ರಮಕ್ಕೆ ಸೂಚನೆ, ಹೈ ಅಲರ್ಟ್
ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರನ್ನು ಸನ್ನದ್ಧವಾಗಿಡಲಾಗಿದೆ. ನದಿ ತಟದ ತಗ್ಗು ಪ್ರದೇಶಗಳ ಮೇಲೆ ಕಟ್ಟುನಿಟ್ಟಿನ ನಿಗಾವಹಿಸುವಂತೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ತಕ್ಷಣವೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
