ಕ್ರೈಂ

ಸುಳ್ಯ/ಕೊಚ್ಚಿ : ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ಎನ್‌ಐಎ ಬಲೆಗೆ

 


ಸುಳ್ಯ/ಕೊಚ್ಚಿ: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ಕೆಲ ಸಮಯದಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸುವಲ್ಲಿ ಯಶಸ್ವಿಯಾಗಿದೆ.

​ಎನ್‌ಐಎಯಿಂದ 'ಮೋಸ್ಟ್ ವಾಂಟೆಡ್' ಪಟ್ಟಿಯಲ್ಲಿದ್ದ ಉಮ್ಮರ್ ಫಾರೂಕ್ ಎಂ.ಆರ್. ಎಂಬಾತನನ್ನು ಕೇರಳದ ಕೊಚ್ಚಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಈತನ ಬಂಧನದೊಂದಿಗೆ ಈ ಕೊಲೆ ಪ್ರಕರಣದಲ್ಲಿ ಎನ್‌ಐಎ ಕೈ ವಶವಾಗಿರುವ ಒಟ್ಟು ಆರೋಪಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

4 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು

ಬಂಧಿತ ಉಮ್ಮರ್ ಫಾರೂಕ್ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಹಾಗೂ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿತ್ತು. ಈತನ ಸುಳಿವು ನೀಡಿದವರಿಗೆ ಎನ್‌ಐಎ 4 ಲಕ್ಷ ರೂಪಾಯಿ ಇನಾಮು ಕೂಡ ಘೋಷಿಸಿತ್ತು. ಪ್ರವೀಣ್ ನೆಟ್ಟಾರು ಹತ್ಯೆಗೆ ಆರೋಪಿಗಳಿಗೆ ದ್ವಿಚಕ್ರ ವಾಹನ ಒದಗಿಸಿದ ಆರೋಪದ ಜೊತೆಗೆ, ಪ್ರಕರಣದ ಮುಖ್ಯ ಸಾಕ್ಷಿಯೊಬ್ಬರ ಹತ್ಯೆಗೆ ಯತ್ನಿಸಿದ ಗಂಭೀರ ಆರೋಪವೂ ಈತನ ಮೇಲಿದೆ.

ಕೊಚ್ಚಿಯಲ್ಲಿ ಕಾರ್ಯಾಚರಣೆ

ಕಳೆದ ಜುಲೈ 11ರಂದು ಎನ್‌ಐಎ ಅಧಿಕಾರಿಗಳು ನೌಷಾದ್ ಮತ್ತು ನಸೀರ್ ಎಂಬಿಬ್ಬರು ಆರೋಪಿಗಳನ್ನು ಬಂಧಿಸಿ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಕೊಚ್ಚಿಯಲ್ಲಿದ್ದ ರಹಸ್ಯ ತಾಣದ ಬಗ್ಗೆ ಲಭಿಸಿದ ನಿಖರ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ತನಿಖಾ ತಂಡ, ಉಮ್ಮರ್ ಫಾರೂಕ್‌ನನ್ನು ವಶಕ್ಕೆ ಪಡೆದಿದೆ.

​ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನು ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಎನ್‌ಐಎ ಹುಡುಕಾಟ ಮುಂದುವರಿಸಿದೆ.



image