ಬೆಂಗಳೂರು: ರಾಜ್ಯಾದ್ಯಂತ ಸಾರ್ವಜನಿಕರ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಂಡಿದೆ. ತಂಬಾಕು ಮತ್ತು ನಿಕೋಟಿನ್‌ಯುಕ್ತ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಸಾಗಾಣಿಕೆ ಮತ್ತು ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ರ ಸೆಕ್ಷನ್ 30(2)(a) ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾರಾಟದ ಮೇಲಿನ ನಿಷೇಧ ಮತ್ತು ನಿರ್ಬಂಧಗಳು) ನಿಯಮಾವಳಿಗಳು-2011 ರ ನಿಯಮ 2.3.4 ರ ಅಡಿಯಲ್ಲಿ ಕರ್ನಾಟಕ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಈ ವಿಶೇಷ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಆದೇಶದ ಪ್ರಮುಖ ಮುಖ್ಯಾಂಶಗಳು:
- ಉತ್ಪನ್ನಗಳ ವ್ಯಾಪ್ತಿ: ಯಾವುದೇ ಬ್ರ್ಯಾಂಡ್ ಅಥವಾ ಹೆಸರಿನಲ್ಲಿ ಮಾರಾಟವಾಗುತ್ತಿದ್ದರೂ, ಅಂತಿಮ ಉತ್ಪನ್ನದಲ್ಲಿ ತಂಬಾಕು ಅಥವಾ ನಿಕೋಟಿನ್ ಅಂಶ ಕಂಡುಬಂದರೆ ಅಂತಹ ಎಲ್ಲಾ ಉತ್ಪನ್ನಗಳಿಗೂ ಈ ನಿಷೇಧ ಅನ್ವಯಿಸಲಿದೆ.
- ಪ್ರತ್ಯೇಕ ಪ್ಯಾಕೆಟ್ ಮಾರಾಟಕ್ಕೂ ತಡೆ: ತಂಬಾಕು ಮತ್ತು ಪಾನ್ ಮಸಾಲಾವನ್ನು ಪ್ರತ್ಯೇಕ ಸ್ಯಾಚೆಟ್ ಅಥವಾ ಪೌಚ್‌ಗಳಲ್ಲಿ ನೀಡಿ, ಗ್ರಾಹಕರು ಬೆರೆಸಿಕೊಳ್ಳುವಂತೆ ಮಾರಾಟ ಮಾಡುವುದನ್ನೂ ಸಹ ಕಾಯ್ದೆಯಡಿ ನಿಷೇಧಿಸಲಾಗಿದೆ.
- ಕಟ್ಟುನಿಟ್ಟಿನ ನಿಯಮ: ಸ್ಯಾಚೆಟ್‌ಗಳು, ಪೌಚ್‌ಗಳು, ಕಂಟೈನರ್‌ಗಳು ಅಥವಾ ಯಾವುದೇ ರೀತಿಯ ಪ್ಯಾಕಿಂಗ್‌ನಲ್ಲಿ ಲಭ್ಯವಿರುವ ನಿಕೋಟಿನ್‌ಯುಕ್ತ ಉತ್ಪನ್ನಗಳಿಗೆ ಈ ಆದೇಶ ಅನ್ವಯಿಸುತ್ತದೆ.
ಈ ನಿಯಮವನ್ನು ಮೀರಿದರೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಲಿದ್ದಾರೆ. ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸರ್ಕಾರ ಸೂಚಿಸಿದೆ.

