ದಕ್ಷಿಣ ಕನ್ನಡ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ಸಡನ್ ರೈಡ್: ಕಂದಾಯ ಇಲಾಖೆ ದಾಖಲೆಗಳ ಜಾಲಾಟ!

 


ಬೆಳ್ತಂಗಡಿ: ಸಾರ್ವಜನಿಕರ ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ಸಾಲು ಸಾಲು ದೂರುಗಳ ಹಿನ್ನೆಲೆಯಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳ್ತಂಗಡಿಯ ಆಡಳಿತ ಸೌಧದಲ್ಲಿರುವ ಕಂದಾಯ ಇಲಾಖೆಯ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

​ಆಗಸ್ಟ್ 13ರಂದು ಪೂರ್ವಾಹ್ನ 11.30ರ ಸುಮಾರಿಗೆ ತಾಲೂಕು ಕಚೇರಿಗೆ ಸರ್ಪ್ರೈಸ್ ಎಂಟ್ರಿ ಕೊಟ್ಟ ಲೋಕಾಯುಕ್ತ ಅಧಿಕಾರಿಗಳ ತಂಡ, ಕಂದಾಯ ವಿಭಾಗದ ಪ್ರಮುಖ ಕಡತಗಳನ್ನು ವಶಕ್ಕೆ ಪಡೆದು ತೀವ್ರ ತನಿಖೆ ಕೈಗೊಂಡಿದೆ. ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿಬಂದಿದ್ದ ಭ್ರಷ್ಟಾಚಾರದ ದೂರುಗಳ ಸತ್ಯಾಸತ್ಯತೆ ತಿಳಿಯಲು ಅಧಿಕಾರಿಗಳು ಕಚೇರಿಯ ಪ್ರತಿಯೊಂದು ವಿಭಾಗದಲ್ಲೂ ಮಾಹಿತಿ ಕಲೆಹಾಕುತ್ತಿದ್ದಾರೆ.

​ಈ ಕಾರ್ಯಾಚರಣೆಯು ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ಅವರ ಮಾರ್ಗದರ್ಶನದಲ್ಲಿ ನೆರವೇರಿದ್ದು, ಇನ್‌ಸ್ಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದ 7 ಸಿಬ್ಬಂದಿಗಳಿದ್ದ ವಿಶೇಷ ತಂಡ ತನಿಖೆಯಲ್ಲಿ ಭಾಗಿಯಾಗಿದೆ.

​ತಂಡದ ಅಧಿಕಾರಿಗಳು ಕಚೇರಿಯಲ್ಲಿದ್ದ ಅರ್ಜಿಗಳು ಹಾಗೂ ಹಳೆಯ ದಾಖಲೆಗಳನ್ನು ಪರಿಶೀಲಿಸುವುದರ ಜೊತೆಗೆ, ವಿವಿಧ ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರನ್ನೂ ಭೇಟಿಯಾಗಿ ಕಂದಾಯ ಸಿಬ್ಬಂದಿಯ ನಡವಳಿಕೆ ಮತ್ತು ಲಂಚದ ಬೇಡಿಕೆ ಕುರಿತು ನೇರ ಮಾಹಿತಿ ಸಂಗ್ರಹಿಸಿದ್ದಾರೆ. ಲೋಕಾಯುಕ್ತರ ಈ ದಿಢೀರ್ ನಡೆ ಕಂದಾಯ ಇಲಾಖೆಯ ಭ್ರಷ್ಟ ಸಿಬ್ಬಂದಿ ಹಾಗೂ ಮಧ್ಯವರ್ತಿಗಳಲ್ಲಿ ತೀವ್ರ ನಡುಕ ಹುಟ್ಟಿಸಿದೆ.

​ಪ್ರಸ್ತುತ ಕಡತಗಳ ಪರಿಶೀಲನೆ ಮುಂದುವರಿದಿದ್ದು, ತನಿಖೆ ಸಂಪೂರ್ಣ ಮುಗಿದ ಬಳಿಕವಷ್ಟೇ ದಾಳಿಯ ಪೂರ್ಣ ಪ್ರಮಾಣದ ವಿವರಗಳು ಹಾಗೂ ಅಕ್ರಮ ಎಸಗಿದ ಸಿಬ್ಬಂದಿಗಳ ಮೇಲಿನ ಕ್ರಮದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.



image