ನ್ಯೂಸ್ 2 ಡೇ ಕನ್ನಡ (ಬೆಂಗಳೂರು):
ಮುಂಬರುವ ಗಣೇಶೋತ್ಸವದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಸರ ಸಂರಕ್ಷಣೆಯತ್ತ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಗ್ರಾಮೀಣ ಪ್ರದೇಶಗಳ ಜಲಮೂಲಗಳು ಹಾಗೂ ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಕೇವಲ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳಿಗಷ್ಟೇ ಅವಕಾಶ ನೀಡಬೇಕು ಎಂದು ಸರ್ಕಾರ ಖಡಕ್ ಆದೇಶ ಹೊರಡಿಸಿದೆ.
ಸಚಿವ ಈಶ್ವರ ಖಂಡ್ರೆ ಅವರಿಂದ ಸರಣಿ ಸೂಚನೆ
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಗ್ರಾಮೀಣ ಭಾಗಗಳಲ್ಲಿ ರಾಸಾಯನಿಕ ಬಣ್ಣ ಬಳಸಿದ ನಿಷೇಧಿತ ಪಿಒಪಿ ಮೂರ್ತಿಗಳ ವಿಸರ್ಜನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಹಬ್ಬದ ದಿನಗಳು ಹತ್ತಿರವಾಗುತ್ತಿರುವಂತೆಯೇ ಪಿಒಪಿ ಮೂರ್ತಿಗಳ ತಯಾರಿಕೆ, ದಾಸ್ತಾನು, ಸಾಗಣೆ ಹಾಗೂ ಮಾರಾಟವನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಯೋಗದೊಂದಿಗೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಲಾಗಿದೆ.
ಪಿಒಪಿ ಮೂರ್ತಿಗಳಿಂದ ಆಗುವ ಹಾನಿಯೇನು?
ಪಿಒಪಿ ಮೂರ್ತಿಗಳನ್ನು ಕ್ಯಾಲ್ಸಿಯಂ ಸಲ್ಫೇಟ್ ಹೆಮಿಹೈಡ್ರೇಟ್ ಪುಡಿಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ಜಿಪ್ಸಮ್, ಸಲ್ಫರ್ ಹಾಗೂ ಮೆಗ್ನೀಷಿಯಂನಂತಹ ರಾಸಾಯನಿಕಗಳು ಇರುತ್ತವೆ. ಅಷ್ಟೇ ಅಲ್ಲದೆ, ಈ ಮೂರ್ತಿಗಳಿಗೆ ಲೇಪಿಸುವ ಬಣ್ಣಗಳಲ್ಲಿ ಪಾದರಸ, ಕ್ಯಾಡ್ಮಿಯಂ ಮತ್ತು ಸೀಸದಂತಹ ಅತ್ಯಂತ ಅಪಾಯಕಾರಿ ಭಾರ ಲೋಹಗಳು (Heavy Metals) ಇರುತ್ತವೆ.
ಈ ಮೂರ್ತಿಗಳನ್ನು ಕೆರೆ, ನದಿ, ಬಾವಿ ಸೇರಿದಂತೆ ಸ್ಥಳೀಯ ಜಲಮೂಲಗಳಲ್ಲಿ ವಿಸರ್ಜಿಸಿದಾಗ ಈ ವಿಷಕಾರಿ ಅಂಶಗಳು ನೀರನ್ನು ಕಲುಷಿತಗೊಳಿಸುತ್ತವೆ. ಇದರಿಂದ ನೀರು ಕುಡಿಯುವ ಸಾರ್ವಜನಿಕರು, ಪ್ರಾಣಿಗಳು ಹಾಗೂ ನೀರಿನಲ್ಲೇ ವಾಸಿಸುವ ಜಲಚರಗಳ ಜೀವಕ್ಕೆ ಕಂಟಕ ಎದುರಾಗಲಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.
ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ!
1974ರ ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆಯ ಸೆಕ್ಷನ್ 33ಎ ಅಡಿಯಲ್ಲಿ ಜಲಮೂಲಗಳಲ್ಲಿ ಪಿಒಪಿ ಮೂರ್ತಿಗಳ ವಿಸರ್ಜನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 2023ರ ಸೆಪ್ಟೆಂಬರ್ 15ರಂದು ಹೊರಡಿಸಲಾದ ಸರ್ಕಾರಿ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಸಹ ನಿರ್ದೇಶನ ನೀಡಿದೆ.
ಆದ್ದರಿಂದ, ನಿಯಮ ಮೀರಿ ಪಿಒಪಿ ಮೂರ್ತಿಗಳನ್ನು ತಯಾರಿಸುವ ಹಾಗೂ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಅಭಿಯಾನ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಸಹಯೋಗದೊಂದಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಒಪಿ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ, ನಿಸರ್ಗದತ್ತ ಮಣ್ಣಿನ ಗೌರಿ-ಗಣೇಶ ಮೂರ್ತಿಗಳನ್ನು ಪೂಜಿಸುವಂತೆ ಸಾರ್ವಜನಿಕರನ್ನು ಉತ್ತೇಜಿಸಲು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಲಾಗಿದೆ.
