ವಿಜಯಪುರ:ಶಾಂತವಾಗಿದ್ದ ಭೀಮಾ ತೀರದಲ್ಲಿ ಮತ್ತೊಮ್ಮೆ ರಕ್ತಪಾತ ಸಂಭವಿಸಿದ್ದು, ನಿವೃತ್ತ ಶಿಕ್ಷಕರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.
ಇಂಡಿ ತಾಲೂಕಿನ ಚೌಡಿಹಾಳ ರಸ್ತೆಯ ಪೂಜಾರಿ ವಸ್ತಿ ಸಮೀಪ ಈ ದುರಂತ ನಡೆದಿದೆ. ಹತ್ಯೆಗೊಳಗಾದವರನ್ನು ಸಿದ್ದಪ್ಪ ಅಂಜುಟಗಿ (63) ಎಂದು ಗುರುತಿಸಲಾಗಿದೆ.
ಪೊಲೀಸರ ತನಿಖೆ ಚುರುಕು:
ಕೊಲೆಗೆ ನಿಖರವಾದ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಇಂಡಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ಪ್ರಾಥಮಿಕ ಕುರುಹುಗಳು ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ನಿವೃತ್ತ ಶಿಕ್ಷಕನ ಈ ಭೀಕರ ಹತ್ಯೆಯಿಂದಾಗಿ ಭೀಮಾ ತೀರದ ಸುತ್ತಮುತ್ತಲಿನ ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಭೀತಿ ಆವರಿಸಿದೆ. ಹತ್ಯೆಯ ಹಿಂದಿರುವ ನೈಜ ಕಾರಣ ಹಾಗೂ ದುಷ್ಕರ್ಮಿಗಳ ಸುಳಿವು ಪೊಲೀಸರ ಪೂರ್ಣ ಪ್ರಮಾಣದ ತನಿಖೆಯ ನಂತರವಷ್ಟೇ ಹೊರಬರಬೇಕಿದೆ.
