ಮೂಡುಬಿದಿರೆ:ದೇಶದ ಭವಿಷ್ಯಕ್ಕೆ ಕಂಟಕವಾಗಿರುವ ಮಾದಕ ದ್ರವ್ಯ ಜಾಲ ಹಾಗೂ ಸೈಬರ್ ಅಪರಾಧಗಳ ವಿರುದ್ಧ ಮೂಡುಬಿದಿರೆಯಲ್ಲಿ ಸಮರ ಸಾರಲಾಗಿದೆ. ಮೂಡುಬಿದಿರೆ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ‘ಕಾನೂನು ಘಟಕ ಮೂಡುಬಿದಿರೆ’ ಹಾಗೂ ‘ಟೀಮ್ ಬೆದ್ರ’ ಸಂಯುಕ್ತವಾಗಿ ಹಮ್ಮಿಕೊಂಡಿರುವ ‘ಬೆದ್ರದಲ್ಲಿ ಡ್ರಗ್ಸ್ ಬೇಡ ಬ್ರೋ’ ಜಾಗೃತಿ ಸ್ಟಿಕ್ಕರ್ ಅಭಿಯಾನಕ್ಕೆ ಅಧಿಕೃತ ಚಾಲನೆ ದೊರೆತಿದೆ.
ಪ್ರತಿಯೊಂದು ಹಳ್ಳಿ, ಕಾಲೇಜು ತಲುಪಲಿದೆ ಜಾಗೃತಿ:
ಕಾರ್ಯಕ್ರಮದ ಆಯೋಜಕರು ಹಾಗೂ ವಕೀಲರಾದ ಪದ್ಮಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, "ಯುವಜನತೆ ಮತ್ತು ವಿದ್ಯಾರ್ಥಿ ಸಮುದಾಯ ದೇಶದ ನಿಜವಾದ ಆಸ್ತಿ. ಡ್ರಗ್ಸ್ ಹಾಗೂ ದಿನೇ ದಿನೇ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಕ್ರಿಯವಾಗಿ ಭಾಗವಹಿಸಬೇಕು. ತಾಲೂಕಿನ ಎಲ್ಲಾ ಕಾಲೇಜುಗಳು ಹಾಗೂ ಗ್ರಾಮ ಗ್ರಾಮಗಳಲ್ಲಿ ಈ ಸ್ಟಿಕ್ಕರ್ ಅಭಿಯಾನದ ಮೂಲಕ ವ್ಯಾಪಕ ಜಾಗೃತಿ ಮೂಡಿಸಲಾಗುವುದು," ಎಂದು ತಿಳಿಸಿದರು.
ಹೆಚ್ಚಿನ ಜಾಗರೂಕತೆ ವಹಿಸಲು ಪೊಲೀಸ್ ಇನ್‌ಸ್ಪೆಕ್ಟರ್ ಕರೆ:
ಮೂಡುಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್ ರಾಜೇಂದ್ರ ಅವರು ಮಾತನಾಡಿ, ಮಾದಕ ದ್ರವ್ಯ ಜಾಲ ಹೆಣೆದಿರುವ ಜಾಲಗಳ ಕುರಿತು ಮಾಹಿತಿ ನೀಡಿದರು. ಜೊತೆಗೆ, ಸೈಬರ್ ವಂಚನೆಗೊಳಗಾಗದಂತೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಹತ್ವದ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿದ್ದ ನಿವೃತ್ತ ಪ್ರಾಂಶುಪಾಲ ಜೆ.ಜೆ. ಪಿಂಟೋ ಅವರು, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಹೇಗೆ ದುರಭ್ಯಾಸಗಳಿಗೆ ಹಾಗೂ ಡ್ರಗ್ಸ್ ದಾಸರಾಗುವ ಸಾಧ್ಯತೆಗಳಿರುತ್ತವೆ ಎಂಬುದನ್ನು ವಿವರಿಸಿ, ಅದರ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಪ್ರವೀಣ್ ಕುಮಾರ್, ಪ್ರಮುಖರಾದ ಅಲ್ವಿನ್ ಡಿಸೋಜ, ಸಿ.ಹೆಚ್. ಗಫೂರ್, ಸೀತಾರಾಮ್ ಆಚಾರ್ಯ, ಅನೀಶ್ ಡಿಸೋಜ, ಕುಮಾರ್ ಪೂಜಾರಿ, ಸುಚರಿತ ಶೆಟ್ಟಿ, ಪುರಂದರ ದೇವಾಡಿಗ ಹಾಗೂ ನವೀನ್ ಟಿ.ಆರ್. ಅತಿಥಿಗಳಾಗಿ ಭಾಗವಹಿಸಿದ್ದರು.
ಕಾನೂನು ಘಟಕದ ಅಧ್ಯಕ್ಷ ಮರ್ವಿನ್ ಲೋಬೊ ವಂದನಾರ್ಪಣೆ ಮಾಡಿದರು. ರಾಜೇಶ್ ಕಡಲೆಕೆರೆ ಕಾರ್ಯಕ್ರಮ ನಿರೂಪಿಸಿದರು. ತಾಲೂಕಿನ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಹಾಗೂ ಯುವಕರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.

