ಕಾಪು (ಉಡುಪಿ): ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮುದರಂಗಡಿಯಲ್ಲಿ ನಡೆದಿದ್ದ ಪ್ರಿನ್ಸ್ ಎಂಟರ್‌ಪ್ರೈಸಸ್ ಮಾಲಕ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಹತ್ಯೆಗೆ ಶೂಟರ್‌ಗಳನ್ನು ಸರಬರಾಜು ಮಾಡಿದ್ದ ಮುಂಬೈನ ನಟೋರಿಯಸ್ ಗ್ಯಾಂಗ್‌ಸ್ಟರ್ ಅನುಜ್ ಪಾಟೀಲ್ (35) ನನ್ನು ಬಂಧಿಸಿದ್ದಾರೆ.
ಬಂಧನದ ವೇಳೆ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿ (ಎನ್‌ಕೌಂಟರ್) ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಘಟನೆಯ ಹಿನ್ನೆಲೆ:
ಕಳೆದ ಆಗಸ್ಟ್ 7ರಂದು ಮಧ್ಯಾಹ್ನ 3:45ರ ಸುಮಾರಿಗೆ ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿರುವ ತಮ್ಮ ಕಚೇರಿಯಲ್ಲಿದ್ದ ಡೇವಿಡ್ ಡಿಸೋಜಾ ಅವರ ಮೇಲೆ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ದಿಢೀರ್ ಪಿಸ್ತೂಲ್‌ನಿಂದ ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಡೇವಿಡ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಈ ಪಾತಕ ಕೃತ್ಯ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿತ್ತು.
ಹೆಬ್ರಿಯಲ್ಲಿ ಖೆಡ್ಡಾ ತೋಡಿದ ಪೊಲೀಸರು:
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕಾರ್ಯಾಚರಣೆಗೆಿಳಿದ ಕುಂದಾಪುರ ಪಿಎಸ್ಐ ನಂಜ ನಾಯಕ್, ಕೊಲ್ಲೂರು ಪಿಎಸ್ಐ ವಿನಯ್ ಹಾಗೂ ಸಿಬ್ಬಂದಿಯನ್ನೊಳಗೊಂಡ ವಿಶೇಷ ಪೊಲೀಸ್ ಪಡೆ ಸೋಮವಾರ ಮುಂಜಾನೆ 6:00 ರಿಂದ 6:30ರ ಅವಧಿಯಲ್ಲಿ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಯಾಚರಣೆ ನಡೆಸಿ, ಶೂಟರ್‌ಗಳ ಮುಖ್ಯಸೂತ್ರಧಾರಿ ಅನುಜ್ ಪಾಟೀಲ್‌ನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಪೋಲಿಸರ ಮೇಲೆಯೇ ಅಟ್ಯಾಕ್, ಶೂಟೌಟ್!
ಆರೋಪಿಯನ್ನು ಬಂಧಿಸಿ ಕರೆತರುತ್ತಿದ್ದ ವೇಳೆ ಅನುಜ್ ಪಾಟೀಲ್ ದಿಢೀರನೆ ಕೊಲ್ಲೂರು ಪಿಎಸ್ಐ ವಿನಯ್ ಅವರ ಬಳಿಯಿದ್ದ ಸ bookService ರಿವಾಲ್ವರ್ ಕಸಿದುಕೊಂಡು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಪೊಲೀಸರತ್ತಲೇ ಗುಂಡು ಹಾರಿಸಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಕುಂದಾಪುರ ಪಿಎಸ್ಐ ನಂಜ ನಾಯಕ್ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆರೋಪಿಯನ್ನು ತಕ್ಷಣವೇ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
11 ಪ್ರಕರಣಗಳು, ಎಮ್‌ಸಿಒಸಿಎ (MCOCA) ಕಾಯ್ದೆ:
ಬಂಧಿತ ಅನುಜ್ ಪಾಟೀಲ್ ಸಾಮಾನ್ಯ ಅಪರಾಧಿಯಲ್ಲ. 2017ರಿಂದಲೇ ಪೊಲೀಸರ ಕಣ್ಣಿಗೆ ಮಣ್ಣೆರೆಚಿ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ಮಹಾರಾಷ್ಟ್ರ, ಗುಜರಾತ್, ದಮನ್-ದಿಯು ಹಾಗೂ ಕರ್ನಾಟಕ ಸೇರಿದಂತೆ ಒಟ್ಟು 11 ಗಂಭೀರ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 10 ಪ್ರಕರಣಗಳು ಶಸ್ತ್ರಾಸ್ತ್ರ ಕಾಯ್ದೆ (Arms Act) ಅಡಿಯಲ್ಲಿದ್ದು, ಮಹಾರಾಷ್ಟ್ರದಲ್ಲಿ ಈತನ ವಿರುದ್ಧ ಕಠಿಣ ‘ಆರ್ಗನೈಸ್ಡ್ ಕ್ರೈಮ್’ (MCOCA) ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದೆ.
ತೀವ್ರಗೊಂಡ ತನಿಖೆ:
ಡೇವಿಡ್ ಡಿಸೋಜಾ ಹತ್ಯೆಗೆ ಸುಪಾರಿ ಕೊಟ್ಟವರು ಯಾರು? ಈ ಕೊಲೆಯ ಹಿಂದಿರುವ ಅಸಲಿ ವೈಷಮ್ಯ ಅಥವಾ ಹಣಕಾಸಿನ ವ್ಯವಹಾರವೇನು? ಅನುಜ್ ಪಾಟೀಲ್‌ಗೆ ಸ್ಥಳೀಯವಾಗಿ ಯಾರು ಸಹಾಯ ಮಾಡಿದ್ದರು ಎಂಬಿತ್ಯಾದಿ ಕೋನಗಳಲ್ಲಿ ಉಡುಪಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಜಾಲದಲ್ಲಿದ್ದ ಇತರ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
