
ಕಳಸ (ಚಿಕ್ಕಮಗಳೂರು): ತಾಲೂಕಿನ ನೆಲ್ಲಿಬೀಡು ಗ್ರಾಮದ ಸಮೀಪದ ಅಪಾಯಕಾರಿ ರಸ್ತೆ ತಿರುವಿನಲ್ಲಿ ಲಾರಿ ಚಾಲಕನೊಬ್ಬ ವಾಹನವನ್ನು ನಿಲ್ಲಿಸಿ, ಕೀ ಸಮೇತ ಪರಾರಿಯಾಗಿರುವ ವಿಚಿತ್ರ ಘಟನೆ ನಡೆದಿದೆ. ಇದರಿಂದಾಗಿ ಕಳಸ-ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಪರದಾಡುವಂತಾಗಿದೆ.
ಧಾರಾಕಾರ ಮಳೆಯ ನಡುವೆಯೇ ಲಾರಿಯನ್ನು ರಸ್ತೆ ಮಧ್ಯದಲ್ಲೇ ಬಿಟ್ಟು ಚಾಲಕ ಕಾಲ್ಕಿತ್ತಿದ್ದಾನೆ. ಪರಿಣಾಮ ರಸ್ತೆಯ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಕಿಲೋಮೀಟರ್‌ಗಟ್ಟಲೆ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.
ಮಾಲೀಕನಿಂದ ಹಣ ಪಡೆದು ಎಸ್ಕೇಪ್:
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಲಾರಿ ಚಾಲಕ ತನ್ನ ಮಾಲೀಕನಿಗೆ ಕರೆ ಮಾಡಿ 6,000 ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾನೆ. ತಕ್ಷಣವೇ ಲಾರಿಯನ್ನು ರಸ್ತೆ ಮಧ್ಯದಲ್ಲೇ ನಿಲ್ಲಿಸಿ, ಕೀ ತಗೊಂಡು ಓಡಿಹೋಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕುದುರೆಮುಖ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೀ ಇಲ್ಲದ ಕಾರಣ ಲಾರಿಯನ್ನು ತೆರವುಗೊಳಿಸಲು ಸಾಧ್ಯವಾಗದೆ, ತಕ್ಷಣವೇ ಬೇರೆ ಚಾಲಕನನ್ನು ಕಳುಹಿಸುವಂತೆ ಲಾರಿ ಮಾಲೀಕರಿಗೆ ಸೂಚಿಸಿದ್ದಾರೆ. ಪರಾರಿಯಾಗಿರುವ ಚಾಲಕನಿಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
ಸ್ಥಳೀಯರ ಆಕ್ರೋಶ – ಸೇತುವೆ ಕುಸಿಯುವ ಭೀತಿ:
ಕಳಸ ಮತ್ತು ಕುದುರೆಮುಖ ಮಾರ್ಗದಲ್ಲಿ ಮೂರು ಅತ್ಯಂತ ಹಳೆಯ ಹಾಗೂ ಜೀರ್ಣಾವಸ್ಥೆಯಲ್ಲಿರುವ ಸೇತುವೆಗಳಿವೆ. ಇಂತಹ ಅಪಾಯಕಾರಿ ರಸ್ತೆಯಲ್ಲಿ ಭಾರಿ ಪ್ರಮಾಣದ ಸರಕು ಹೊತ್ತೊಯ್ಯುವ ದೊಡ್ಡ ಲಾರಿಗಳ ಸಂಚಾರಕ್ಕೆ ಅವಕಾಶ ನೀಡುತ್ತಿರುವುದಕ್ಕೆ ಸ್ಥಳೀಯರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಈ ಹಳೆಯ ಸೇತುವೆಗಳಲ್ಲಿ ಒಂದೇ ಒಂದು ಕಳಚಿ ಬಿದ್ದರೂ ಕಳಸ ಮತ್ತು ಕುದುರೆಮುಖ ನಡುವಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳಲಿದೆ. ಕೂಡಲೇ ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಬೇಕು," ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಳೆಯ ನಡುವೆ ಸಂಕಷ್ಟಕ್ಕೆ ಸಿಲುಕಿರುವ ಪ್ರವಾಸಿಗರು ಹಾಗೂ ಸಾರ್ವಜನಿಕರು, ತಕ್ಷಣವೇ ಲಾರಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಕುದುರೆಮುಖ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.