ದಕ್ಷಿಣ ಕನ್ನಡ

Kadaba: ದಕ್ಷಿಣ ಕನ್ನಡದಲ್ಲಿ ಮತ್ತೆ 'ಅನೈತಿಕ ಪೊಲೀಸ್‌ಗಿರಿ' ಸದ್ದು; ಯುವತಿ, ಕುಟುಂಬದ ಮೇಲೆ ಹಲ್ಲೆ ಆರೋಪ - 9 ಜನರ ವಿರುದ್ಧ FIR

ಕಡಬ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಅನೈತಿಕ ಪೊಲೀಸ್‌ಗಿರಿ ಆರೋಪ ಕೇಳಿಬಂದಿದ್ದು, ಯುವತಿ ಹಾಗೂ ಆಕೆಯ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಡಬ ತಾಲೂಕಿನ ಕೋಲ್ಪೆ ಗ್ರಾಮದಲ್ಲಿ ಆಗಸ್ಟ್ 12ರಂದು ಈ ಘಟನೆ ಸಂಭವಿಸಿದ್ದು, ಪ್ರಸ್ತುತ ಸಂತ್ರಸ್ತ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

​ಕಾರು ತಡೆದು ಹಲ್ಲೆ ನಡೆಸಿದ ಪುಂಡರು:

​ಕೋಲ್ಪೆ ನಿವಾಸಿ ಫಾಯಿಝಾ (18) ಎಂಬ ಯುವತಿ ಮೆಲ್ಕಾರ್‌ನಲ್ಲಿ ಕೆಲಸ ಮುಗಿಸಿ, ಆ ಬಟ್ಟೆ ಅಂಗಡಿಯ ಮಾಲೀಕ ಝಾಹಿರ್ ಅವರ ಸ್ನೇಹಿತ ಸಿಪ್ಪಾನ್ ಅವರ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಕಾರಿನಲ್ಲಿ ಝಾಹಿರ್ ಅವರ ತಾಯಿ ಸಫಿಯಾ ಕೂಡ ಇದ್ದರು. ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಕೋಲ್ಪೆ ತಲುಪಿದಾಗ, 5 ರಿಂದ 6 ಜನರಿದ್ದ ಪುಂಡರ ಗುಂಪೊಂದು ಕಾರು ಹಾಗೂ ಜೊತೆಯಲ್ಲಿದ್ದ ಸ್ಕೂಟರ್ ಅನ್ನು ತಡೆದು ಗಲಾಟೆ ಆರಂಭಿಸಿದೆ.

​ಈ ವೇಳೆ ಯುವತಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿ, ಕಪಾಳಕ್ಕೆ ಹೊಡೆದು ಜೀವ ಬೆದರಿಕೆ ಹಾಕಲಾಗಿದೆ. ಗಲಾಟೆ ಬಿಡಿಸಲು ಬಂದ ಜಮಾಲ್ ಎಂಬುವವರ ಮೇಲೆಯೂ ಹಲ್ಲೆ ನಡೆಸಿ ತಳ್ಳಾಡಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

​ತಂಗಿಯ ಮೇಲೆಯೂ ಹಲ್ಲೆ:

​ಅಷ್ಟೇ ಅಲ್ಲದೆ, ಗಲಾಟೆಯ ಸದ್ದಿಗೆ ಸ್ಥಳಕ್ಕೆ ಧಾವಿಸಿದ ಯುವತಿಯ ತಂಗಿ ಫಾಸಿಲಾ, ಪ್ರಜ್ಞೆ ತಪ್ಪಿ ಬಿದ್ದಿದ್ದ ಅಕ್ಕನನ್ನು ಎತ್ತಲು ಯತ್ನಿಸಿದಾಗ ಆಕೆಯ ಮೇಲೆಯೂ ಸಿದ್ದೀಕ್ ಎಂಬಾತ ಕಪಾಳಕ್ಕೆ ಹೊಡೆದು ತಳ್ಳಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

​ಆಸ್ಪತ್ರೆಯಿಂದಲೇ ವಿಡಿಯೋ ವೈರಲ್, 9 ಮಂದಿ ವಿರುದ್ಧ ಪ್ರಕರಣ:

​ಘಟನೆಯಲ್ಲಿ ಗಾಯಗೊಂಡ ಯುವತಿ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯ ಮಂಚದ ಮೇಲಿಂದಲೇ ವಿಡಿಯೋ ಮಾಡಿ ತಮಗಾದ ಅನ್ಯಾಯವನ್ನು ಹಂಚಿಕೊಂಡಿದ್ದಾರೆ.

​ಸಂತ್ರಸ್ತೆ ನೀಡಿದ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ BNS ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ (115(2), 126(2), 189(2), 190, 191(2), 351(2), 352) ಪ್ರಕರಣ ದಾಖಲಾಗಿದೆ.

​ಆರೋಪಿಗಳ ವಿವರ:

ಜಾಬೀರ್, ಸಿದ್ದೀಕ್, ಉನೈಸ್, ರಂಶಿಕ್, ಸಂಶುದ್ದೀನ್, ಜಾಫರ್, ಆಶಿತ್, ಆಚೂರು ಅಲಿಯಾಸ್ ಅಶ್ರಫ್ ಹಾಗೂ ಅಶ್ರಫ್ ಕೋಲ್ಪೆ ಸೇರಿದಂತೆ ಒಟ್ಟು 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆ ಕೈಗೊಂಡಿದ್ದಾರೆ.



image