ದೇಶ

​kasaragod :ಡಿಸೆಂಬರ್‌ನಲ್ಲಿ ಮದುವೆಯಾಗಬೇಕಿದ್ದ ಬ್ಯಾಂಕ್‌ ಉದ್ಯೋಗಿ ಜೋಡಿ ಆತ್ಮಹತ್ಯೆಗೆ ಶರಣು!


ಕಾಸರಗೋಡು: ನಿಶ್ಚಿತಾರ್ಥ ಮುಗಿದು, ಇನ್ನೇನು ಕೆಲವೇ ತಿಂಗಳುಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಯುವ ಬ್ಯಾಂಕ್‌ ಉದ್ಯೋಗಿ ಜೋಡಿಯೊಂದು ಪ್ರತ್ಯೇಕ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

​ಮೃತರನ್ನು ಕಾಸರಗೋಡು ಪಳ್ಳಿಕ್ಕರ ಮೂಲದ ಪಿ. ಅನುಶ್ರೀ (25) ಹಾಗೂ ಕಣ್ಣೂರು ಅಂಬಲತಟ್ಟು ನಿವಾಸಿ ವಿ. ಅಮಲ್ (26) ಎಂದು ಗುರುತಿಸಲಾಗಿದೆ.

ಮೈಸೂರು ಹಾಗೂ ಕೊಚ್ಚಿಯಲ್ಲಿ ಶವವಾಗಿ ಪತ್ತೆ

​ಮೈಸೂರು ಜಿಲ್ಲೆಯ ಹುಣಸೂರಿನ ಎಸ್‌ಬಿಐ (SBI) ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅನುಶ್ರೀ, ಹುಣಸೂರಿನ ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಆಘಾತಕಾರಿ ಸುದ್ದಿ ಹೊರಬಿದ್ದ ಕೆಲವೇ ಗಂಟೆಗಳಲ್ಲಿ, ಅಂದರೆ ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ, ಅನುಶ್ರೀ ಅವರ ನಿಶ್ಚಿತಾರ್ಥವಾಗಿದ್ದ ಅಮಲ್ ಕೂಡ ಕೊಚ್ಚಿಯ ಎರ್ನಾಕುಲಂ ನಾರ್ತ್ ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಮಲ್ ಅವರು ಎರ್ನಾಕುಲಂನ ಎಂ.ಜಿ. ರೋಡ್‌ನಲ್ಲಿರುವ ಎಸ್‌ಬಿಐ ಶಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು.

ಮನೆಯಲ್ಲಿದ್ದ ಆನಂದ ಕೆಲವೇ ದಿನಗಳಲ್ಲಿ ಶೋಕಸಾಗರ

​ಮೃತ ಅನುಶ್ರೀ ಅವರು ಪಳ್ಳಿಕ್ಕರದ ಕೆ. ಚಂದ್ರನ್ ಮತ್ತು ರೀನಾ ದಂಪತಿಯ ಪುತ್ರಿಯಾಗಿದ್ದು, ಅಮಲ್ ಅವರು ಕಣ್ಣೂರಿನ ಸುಧಾಕರನ್ ಹಾಗೂ ಅನಿತಾ ದಂಪತಿಯ ಮಗನಾಗಿದ್ದಾರೆ. ಇಬ್ಬರಿಗೂ ಇತ್ತೀಚೆಗಷ್ಟೇ ನಿಶ್ಚಿತಾರ್ಥ ನೆರವೇರಿತ್ತು. ಬರುವ ಡಿಸೆಂಬರ್ 26 ರಂದು ಮದುವೆ ನಿಶ್ಚಯವಾಗಿತ್ತು. ಕಳೆದ ಶನಿವಾರವಷ್ಟೇ ಇಬ್ಬರೂ ಕಾಸರಗೋಡಿನ ತಮ್ಮ ಮನೆಗಳಿಗೆ ಭೇಟಿ ನೀಡಿ, ಭಾನುವಾರ ಸಂಜೆ ವಾಪಸ್ ಉದ್ಯೋಗದ ಸ್ಥಳಗಳಿಗೆ ತೆರಳಿದ್ದರೆಂದು ಸ್ಥಳೀಯ ಮೂಲಗಳು ತಿಳಿಸಿವೆ.

ಪೊಲೀಸ್ ತನಿಖೆ ಚುರುಕು

​ಅಮಲ್ ಅವರ ಸ್ನೇಹಿತ ಶಾಯೋನ್ ನೀಡಿದ ಸುಳಿವು ಆಧರಿಸಿ ಎರ್ನಾಕುಲಂ ಟೌನ್ ನಾರ್ತ್ ಪೊಲೀಸರು ಹೋಟೆಲ್ ಕೊಠಡಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದೆಡೆ ಹುಣಸೂರು ಗ್ರಾಮಾಂತರ ಪೊಲೀಸರು ಅನುಶ್ರೀ ಅವರ ಅನುಮಾನಾಸ್ಪದ ಸಾವಿನ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

​ಮದುವೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಇಬ್ಬರೂ ಈ ರೀತಿ ಕಠಿಣ ನಿರ್ಧಾರ ತಳೆದದ್ದು ಎರಡೂ ಕುಟುಂಬಗಳನ್ನು ತೀವ್ರ ಆಘಾತಕ್ಕೆ ದೂಡಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಪೊಲೀಸ್ ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ.





image