ದಕ್ಷಿಣ ಕನ್ನಡ

Kokkada :ಅಪ್ರಾಪ್ತ ಬಾಲಕಿಯ ಕರೆದೊಯ್ಯುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ; ಎರಡೂ ಕಡೆಯವರ ವಿರುದ್ಧ ಪೊಲೀಸ್ ದೂರು

 

ಧರ್ಮಸ್ಥಳ/ಉಪ್ಪಿನಂಗಡಿ:

ಪರಿಚಯಸ್ಥರ ಮಗಳೆಂಬ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು ರಾತ್ರಿ ವೇಳೆ ಕಾರಿನಲ್ಲಿ ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಕೊಕ್ಕಡ ಸಮೀಪದ ಕಾಪಿನಬಾಗಿಲಿನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ಐವರು ಯುವಕರು ಹಾಗೂ ಬಾಲಕಿಯನ್ನು ಕರೆದೊಯ್ಯುತ್ತಿದ್ದ ವ್ಯಕ್ತಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ.

ಘಟನೆಯ ಹಿನ್ನೆಲೆ:

​ಕಾರ್ಕಳ ತಾಲೂಕಿನ ಈದು ನಿವಾಸಿ ಶೈಕ್ ಮುಕ್ತಾರ್ (50) ಎಂಬಾತ ಆ.11ರಂದು ರಾತ್ರಿ ತನ್ನ ಪರಿಚಯಸ್ಥರ ಅಪ್ರಾಪ್ತ ಮಗಳನ್ನು ಕಾರಿನಲ್ಲಿ ಹಾಸನದ ಕಡೆಗೆ ಕರೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಈ ವೇಳೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕಡದ ಕಾಪಿನಬಾಗಿಲು ಎಂಬಲ್ಲಿ ಸ್ಥಳೀಯರ ಗುಂಪೊಂದು ಕಾರನ್ನು ತಡೆದು ನಿಲ್ಲಿಸಿದೆ. ಕಾರಿನಲ್ಲಿದ್ದ ಬಾಲಕಿಯ ಬಗ್ಗೆ ವಿಚಾರಿಸಿದ ಗುಂಪು, ಚಾಲಕ ಶೈಕ್ ಮುಕ್ತಾರ್‌ಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.

ಹಲ್ಲೆ ನಡೆಸಿದ ಐವರ ಬಂಧನ:

​ಘಟನೆಗೆ ಸಂಬಂಧಿಸಿ ಶೈಕ್ ಮುಕ್ತಾರ್ ನೀಡಿದ ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸರು ಪ್ರಕರಣ (ಅ.ಕ್ರ: 106/2026) ದಾಖಲಿಸಿಕೊಂಡಿದ್ದಾರೆ. ಹಲ್ಲೆ ನಡೆಸಿದ ಆರೋಪದ ಮೇಲೆ ಕೊಕ್ಕಡದ ಧನುಷ್ (23), ಚಾರ್ಮಾಡಿ ದಿನೇಶ್ (45), ಪುದುವೆಟ್ಟಿನ ಪೂರ್ಣಕ್ಷ ಬಿ (40), ಕೊಕ್ಕಡದ ಸೂರಜ್ (25) ಮತ್ತು ರಂಜಿತ್ ಬಂಡಾರಿ (29) ಎಂಬ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಾಲಕಿಯ ತಾಯಿಯಿಂದ ಪ್ರತಿದೂರು (Zero FIR):

​ಮತ್ತೊಂದೆಡೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿಯ ತಾಯಿ ಪೊಲೀಸರಿಗೆ ಪ್ರತಿದೂರು ನೀಡಿದ್ದಾರೆ. ಶೇಕ್ ಮುಕ್ತಾರ್ ತನ್ನ ಮಗಳನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಅಪಹರಿಸಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಶೇಕ್ ಮುಕ್ತಾರ್ ವಿರುದ್ಧ 'ಝೀರೋ ಎಫ್‌ಐಆರ್' (ZERO FIR 03/2026) ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





image