ಮಂಗಳೂರು: ಕರಾವಳಿ ನಗರಿಯ ಪ್ರತಿಷ್ಠಿತ ಮಾಲ್‌ನಲ್ಲಿರುವ ಜನಪ್ರಿಯ ಫಾಸ್ಟ್ ಫುಡ್ ಸಂಸ್ಥೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಸಿಟಿ ಸೆಂಟರ್‌ನಲ್ಲಿ ಕಾರ್ಯಾಚರಿಸುತ್ತಿರುವ KFC (ಕೆಎಫ್‌ಸಿ) ಔಟ್‌ಲೆಟ್ ಮೇಲೆ ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳ ತಂಡ ದಿಡೀರ್ ದಾಳಿ ನಡೆಸಿದ್ದು, ಹಳೆಯ ಹಾಗೂ ಅಸುರಕ್ಷಿತ ಕೋಳಿ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
9 ತಿಂಗಳ ಹಳೆಯ ಮಾಂಸ ಪತ್ತೆ?
ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಬಂದ ದೂರುಗಳು ಹಾಗೂ ನಿಯಮಿತ ತಪಾಸಣೆಯ ಭಾಗವಾಗಿ ಅಧಿಕಾರಿಗಳು ಈ ದಾಳಿ ನಡೆಸಿದ್ದರು. ಪರಿಶೀಲನೆಯ ವೇಳೆ ಸುಮಾರು 9 ತಿಂಗಳಷ್ಟು ಹಳೆಯದಾದ, ಸಂಗ್ರಹಿಸಿಡಲಾಗಿದ್ದ ಕೋಳಿ ಮಾಂಸ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಮಳಿಗೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿಸಿ, ಬೀಗ ಜಡಿದಿದ್ದಾರೆ.
ತನಿಖೆ ಚುರುಕು:
ಆಹಾರದ ಗುಣಮಟ್ಟ ಮತ್ತು ಸುರಕ್ಷತಾ ಕಾಯ್ದೆಯಡಿ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ತಪಾಸಣಾ ವರದಿ ಬಂದ ನಂತರ ಸಂಸ್ಥೆಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಗ್ರಾಹಕರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಯಾವುದೇ ಬ್ರಾಂಡ್‌ಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಎಚ್ಚರಿಸಿದೆ.

