
ಮಂಗಳೂರು :ಮಂಗಳೂರು ಹೊರವಲಯದ ಬಜ್ಪೆ ಸಮೀಪದ ಪೆರ್ಮುದೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಮನೆ ಅಂಗಳಕ್ಕೆ ನುಗ್ಗಿದ ಚಿರತೆಯೊಂದು ಅಲ್ಲೇ ಮಲಗಿದ್ದ ಸಾಕಾಯ್ತ ಶ್ವಾನವನ್ನು ಬೇಟೆಯಾಡಿ ಹೊತ್ತೊಯ್ದಿದೆ.
ಪೆರ್ಮುದೆಯ ದಿವಂಗತ ಜಿ.ಕೆ. ನೋಣಯ್ಯ ಪೂಜಾರಿ ಅವರ ನಿವಾಸದ ಆವರಣದಲ್ಲಿ ಈ ಘಟನೆ ಸಂಭವಿಸಿದೆ. ರಾತ್ರಿಯ ನಿಶ್ಶಬ್ದದ ನಡುವೆ ಏಕಾಏಕಿ ಮನೆ ಅಂಗಳಕ್ಕೆ ಬಂದ ಚಿರತೆ, ವಿಶ್ರಮಿಸುತ್ತಿದ್ದ ಶ್ವಾನದ ಮೇಲೆ ಮಿಂಚಿನ ವೇಗದಲ್ಲಿ ದಾಳಿ ನಡೆಸಿದೆ. ಬಳಿಕ ಅದನ್ನು ಬಾಯಿಯಲ್ಲಿ ಕಚ್ಚಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದೆ.
ಈ ಸಮಗ್ರ ಸನ್ನಿವೇಶವು ಮನೆಯ ಆವರಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಭೀಕರವಾಗಿ ಸೆರೆಯಾಗಿದ್ದು, ಸ್ಥಳೀಯರ ಎದೆಯಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜನವಸತಿ ಪ್ರದೇಶದ ತೀರಾ ಹತ್ತಿರಕ್ಕೇ ಚಿರತೆ ಲಗ್ಗೆ ಇಡುತ್ತಿರುವುದು ಪೆರ್ಮುದೆ ಹಾಗೂ ಸುತ್ತಮುತ್ತಲಿನ ನಿವಾಸಿಗಳ ನಿದ್ದೆಗೆಡಿಸಿದೆ.
ಅಲ್ಲದೆ, ಈ ಭಾಗದಲ್ಲಿ ಇನ್ನಷ್ಟು ಚಿರತೆಗಳು ಮುಕ್ತವಾಗಿ ಸಂಚರಿಸುತ್ತಿರುವ ಶಂಕೆ ವ್ಯಕ್ತವಾಗಿದ್ದು, ಸಾರ್ವಜನಿಕರ ಜೀವಕ್ಕೆ ಭದ್ರತೆ ಇಲ್ಲದಂತಾಗಿದೆ. ತಕ್ಷಣವೇ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ಬೋನು ಅಳವಡಿಸಿ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ.