ಹೈದರಾಬಾದ್ : ಕಾರು ಢಿಕ್ಕಿ ಹೈದರಾಬಾದ್‌ನಲ್ಲಿ ಯುವತಿ ದುರಂತ ಸಾವು, MP ಪುತ್ರನ ವಿರುದ್ಧ FIR!

 


ಹೈದರಾಬಾದ್:

ಆಂಧ್ರಪ್ರದೇಶದ ಜನಸೇನಾ ಪಕ್ಷದ ರಾಜ್ಯಸಭಾ ಸಂಸದ ಲಿಂಗಮನೇನಿ ರಮೇಶ್ ಅವರ ಪುತ್ರ ಚಲಾಯಿಸುತ್ತಿದ್ದ ಐಷಾರಾಮಿ ಕಾರು ಢಿಕ್ಕ ಹೊಡೆದ ಪರಿಣಾಮ, 26 ವರ್ಷದ ಯುವತಿಯೊಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಭೀಕರ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

​ಮೃತ ಯುವತಿಯನ್ನು ಸ್ಥಳೀಯ ಇನಾರ್ಬಿಟ್ ಮಾಲ್‌ನ ಲೈಫ್‌ಸ್ಟೈಲ್ ಸ್ಟೋರ್‌ನಲ್ಲಿ ಉದ್ಯೋಗಿಯಾಗಿದ್ದ ಭಾರತೀ ಮುಖಿ (26) ಎಂದು ಗುರುತಿಸಲಾಗಿದೆ.

​ಘಟನೆಯ ವಿವರ:

ಮಧ್ಯಾಹ್ನದ ವೇಳೆ ಭಾರತೀ ಮುಖಿ ಅವರು ರಸ್ತೆ ದಾಟುತ್ತಿದ್ದಾಗ, ಸಂಸದರ ಪುತ್ರ ಸಂಜುಶ್ ಚಲಾಯಿಸುತ್ತಿದ್ದ ಅತಿವೇಗದ 'ಆಸ್ಟನ್ ಮಾರ್ಟಿನ್' ಐಷಾರಾಮಿ ಕಾರು ನಿರ್ಲಕ್ಷ್ಯದಿಂದ ಬಂದು ಭಾರತೀ ಅವರಿಗೆ ನೇರವಾಗಿ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಅದೇ ಕಾರಿನಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

​ಪೊಲೀಸ್ ತನಿಖೆ ಚುರುಕು:

ಘಟನೆಗೆ ಸಂಬಂಧಿಸಿದಂತೆ ಮಾದಾಪುರ ಪೊಲೀಸ್ ಠಾಣೆಯಲ್ಲಿ ಲಿಂಗಮನೇನಿ ಸಂಜುಶ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 106(1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪಘಾತಕ್ಕೆ ಕಾರಣವಾದ ಆಸ್ಟನ್ ಮಾರ್ಟಿನ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕ ಮದ್ಯಪಾನ ಮಾಡಿದ್ದನೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರಕ್ತದ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ತನಿಖೆಗೆ ಕಳುಹಿಸಲಾಗಿದೆ. ಘಟನೆ ಕುರಿತು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



image