ದೇಶ

New Delhi :ಎವರೆಸ್ಟ್, ಲಾಲ್ಜಿ ಗೋಧು ಸಂಸ್ಥೆಗಳ ಇಂಗು ಮಾರಾಟಕ್ಕೆ FSSAI ತಡೆ: ಗರಂ ಮಸಾಲ ಸೇರಿ 3 ಉತ್ಪನ್ನಗಳು ಕಳಪೆ!

ನವದೆಹಲಿ: ದೇಶದ ಪ್ರಮುಖ ಮಸಾಲೆ ಉತ್ಪಾದನಾ ಸಂಸ್ಥೆಗಳಾದ 'ಎವರೆಸ್ಟ್ ಫುಡ್ ಪ್ರಾಡಕ್ಟ್ಸ್' ಹಾಗೂ 'ಲಾಲ್ಜಿ ಗೋಧು & ಕಂಪನಿ'ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಬೃಹತ್ ಆಘಾತ ನೀಡಿದೆ. ಗುಣಮಟ್ಟದ ಪರೀಕ್ಷೆಯಲ್ಲಿ ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ, ಈ ಸಂಸ್ಥೆಗಳ ಇಂಗು ಪುಡಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ ಆದೇಶಿಸಿದೆ.

​ಆಹಾರ ಪ್ರಯೋಗಾಲಯದ ತಪಾಸಣೆಯಲ್ಲಿ ಲೋಪ ಪತ್ತೆ

FSSAI ನಡೆಸಿದ ಪ್ರಾಥಮಿಕ ಆಹಾರ ಪ್ರಯೋಗಾಲಯ ಪರಿಶೀಲನೆಯಲ್ಲಿ ಇಂಗು ಪುಡಿಯ ಮಾದರಿಗಳು ಕಳಪೆ ಗುಣಮಟ್ಟದಿಂದ ಕೂಡಿರುವುದು ಹಾಗೂ ತಪ್ಪಾದ ಬ್ರಾಂಡಿಂಗ್ ಹೊಂದಿರುವುದು ದೃಢಪಟ್ಟಿದೆ. ಈ ಉತ್ಪನ್ನಗಳು ಆಹಾರ ಸುರಕ್ಷತೆ ಮತ್ತು ಮಾನದಂಡಗಳ (FSS) ನಿಯಮಗಳು, 2011ರ ನಿಬಂಧನೆಗಳನ್ನು ಉಲ್ಲಂಘಿಸಿವೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

​ನಿಯಮಾವಳಿ ಉಲ್ಲಂಘನೆಯ ವಿವರಗಳು:

​ಇಂಗು ಪುಡಿ: ನಿಯಮಗಳ ಪ್ರಕಾರ ಇರಬೇಕಾದ ಕನಿಷ್ಠ ಶೇ. 5ರಷ್ಟು ಆಲ್ಕೋಹಾಲ್-ಕರಗುವ ಸಾರದ (Alcohol-soluble extract) ಅಂಶವು ಈ ಮಾದರಿಗಳಲ್ಲಿ ಸಂಪೂರ್ಣವಾಗಿ ಶೂನ್ಯ (0%) ಕಂಡುಬಂದಿದೆ.

​ಹಳದಿ ಮಿಶ್ರಿತ ಇಂಗು: ಇದರಲ್ಲಿ ಆಲ್ಕೋಹಾಲ್-ಕರಗುವ ಸಾರದ ಪ್ರಮಾಣ ಶೇ. 3.29ರಷ್ಟು ಮಾತ್ರ ಇತ್ತು.

​ಕಪ್ಪು ಮಿಶ್ರಿತ ಇಂಗು: ಈ ಮಾದರಿಯಲ್ಲಿ ಸಾರದ ಪ್ರಮಾಣ ಶೇ. 4.4ರಷ್ಟು ದಾಖಲಾಗಿದ್ದು, ನಿಗದಿತ ಮಾನದಂಡ ತಲುಪುವಲ್ಲಿ ವಿಫಲವಾಗಿದೆ.

​ಮೂರು ಪ್ರಮುಖ ಮಸಾಲೆಗಳಿಗೂ ಬಿತ್ತು ಕೋಕ್

ಇಂಗು ಪುಡಿಯಷ್ಟೇ ಅಲ್ಲದೆ, ಎವರೆಸ್ಟ್ ಸಂಸ್ಥೆಯ ಗರಂ ಮಸಾಲ, ಚಿಕನ್ ಮಸಾಲ ಹಾಗೂ ಎಗ್ ಕರಿ ಮಸಾಲ ಉತ್ಪನ್ನಗಳಲ್ಲೂ ಗಂಭೀರ ಲೋಪಗಳು ಕಂಡುಬಂದಿವೆ. ಗುಣಮಟ್ಟದ ಮಾನದಂಡಗಳನ್ನು ಕಾಯ್ದುಕೊಳ್ಳದ ಕಾರಣ FSSAI ಈ ಸಂಬಂಧ ಸಂಸ್ಥೆಗೆ ಅಧಿಕೃತ ನೋಟಿಸ್ ಜಾರಿ ಮಾಡಿದೆ.

​ಉತ್ಪನ್ನಗಳಲ್ಲಿ ಕಂಡುಬಂದಿರುವ ಈ ತಾಂತ್ರಿಕ ಹಾಗೂ ಗುಣಮಟ್ಟದ ನ್ಯೂನತೆಗಳನ್ನು ತಕ್ಷಣವೇ ಸರಿಪಡಿಸದಿದ್ದರೆ, ಸಂಸ್ಥೆಗಳ ವಿರುದ್ಧ ಮತ್ತಷ್ಟು ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ FSSAI ಎಚ್ಚರಿಕೆ ನೀಡಿದೆ.



image