ದಕ್ಷಿಣ ಕನ್ನಡ

ಮಂಗಳೂರು : ಶಾಲಾ ವಾಹನಗಳಲ್ಲಿ ಮಿತಿಮೀರಿದ ವಿದ್ಯಾರ್ಥಿಗಳ ಸಾಗಾಟ: ಕಟ್ಟುನಿಟ್ಟಿನ ಕ್ರಮಕ್ಕೆ RTO ಅಧಿಕಾರಿಗೆ ಜೆಡಿಎಸ್ ಮನವಿ

 


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಸಾಗಿಸುವ ಖಾಸಗಿ ಹಾಗೂ ಶೈಕ್ಷಣಿಕ ಸಂಸ್ಥೆಗಳ ವಾಹನಗಳಲ್ಲಿ ನಿಗದಿತ ಆಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕುಳ್ಳಿರಿಸಿಕೊಂಡು ಅಪಾಯಕಾರಿಯಾಗಿ ಸಂಚರಿಸಲಾಗುತ್ತಿದೆ. ಈ ಕೂಡಲೇ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಸುರಕ್ಷತಾ ತಪಾಸಣೆ ನಡೆಸಬೇಕು ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಜನತಾದಳ (ಜಾತ್ಯತೀತ) ಪಕ್ಷದ ನಿಯೋಗವು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ (RTO) ಮನವಿ ಸಲ್ಲಿಸಿದೆ.

​ಜೆಡಿಎಸ್ ಮುಖಂಡ ಯೋಗಿಶ್ ಶೆಟ್ಟಿ ಜೆಪ್ಪು ಅವರ ನೇತೃತ್ವದಲ್ಲಿ ತೆರಳಿದ ನಿಯೋಗವು ಸಾರಿಗೆ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಪತ್ರ ಹಸ್ತಾಂತರಿಸಿತು.

ಪೋಷಕರಿಂದ ದೂರು, ಮಳೆಗಾಲದಲ್ಲಿ ಹೆಚ್ಚಿದ ಆತಂಕ:

ನಿಯಮ ಮೀರಿ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಹೋಗುತ್ತಿರುವ ಬಗ್ಗೆ ಸಾರ್ವಜನಿಕರು, ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ನಿರಂತರವಾಗಿ ದೂರುಗಳು ಕೇಳಿಬರುತ್ತಿವೆ. ಪ್ರಸ್ತುತ ಜಿಲ್ಲೆಯಲ್ಲಿ ಮಳೆಗಾಲ ತೀವ್ರಗೊಂಡಿದ್ದು, ರಸ್ತೆಗಳು ಜಾರುತ್ತಿವೆ. ಗುಂಡಿ ಬಿದ್ದಿರುವ ಹಾಗೂ ನೀರು ನಿಂತಿರುವ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವುದು ಸವಾಲಿನ ಕೆಲಸವಾಗಿದೆ. ಮಳೆಗಾಲದಲ್ಲಿ ಗೋಚರತೆಯೂ ಕಡಿಮೆಯಿರುವುದರಿಂದ, ಇಂತಹ ಸಂದರ್ಭಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಸಾಗಿಸುವುದು ಜೀವಕ್ಕೆ ಕಂಟಕವಾಗಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ವಾಹನಗಳ ತಾಂತ್ರಿಕ ಪರಿಶೀಲನೆಗೆ ಆಗ್ರಹ:

ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಹಲವು ಶಾಲಾ ವಾಹನಗಳು ಹಳೆಯದಾಗಿದ್ದು, ಅವುಗಳ ತಾಂತ್ರಿಕ ಸ್ಥಿತಿಗತಿ ಬಗ್ಗೆ ಸಂಶಯ ಮೂಡಿದೆ. ವಾಹನಗಳ ಬ್ರೇಕ್ ವ್ಯವಸ್ಥೆ, ಟೈರ್‌ಗಳ ಸ್ಥಿತಿ, ಸ್ಟೀರಿಂಗ್, ಎಂಜಿನ್, ವಿದ್ಯುತ್ ಸಂಪರ್ಕ ಹಾಗೂ ತುರ್ತು ನಿರ್ಗಮನ (Emergency Exit) ವ್ಯವಸ್ಥೆಗಳು ಸರಿಯಾಗಿವೆಯೇ ಎಂಬುದನ್ನು ತಕ್ಷಣವೇ ಪರಿಶೀಲಿಸಬೇಕು. ಪ್ರತಿಯೊಂದು ಶಾಲಾ ವಾಹನದ ಸಮಗ್ರ ತಾಂತ್ರಿಕ ಪರಿಶೀಲನೆ ನಡೆಸಿ, ಕಡ್ಡಾಯವಾಗಿ ಫಿಟ್‌ನೆಸ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

​ವಿದ್ಯಾರ್ಥಿಗಳ ಸುರಕ್ಷತೆಯು ಶಾಲೆಗಳ ಜವಾಬ್ದಾರಿಯಷ್ಟೇ ಅಲ್ಲದೆ, ಜಿಲ್ಲಾಡಳಿತ ಮತ್ತು ಸರ್ಕಾರ ಆದ್ಯತೆಯ ಮೇರೆಗೆ ಗಮನಹರಿಸಬೇಕಾದ ವಿಷಯವಾಗಿದೆ. ಆದ್ದರಿಂದ ಸಾರಿಗೆ ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸೂಕ್ತ ತಪಾಸಣೆ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕೆಂದು ನಿಯೋಗವು ಒತ್ತಾಯಿಸಿದೆ.



image