ಕ್ರೈಂ

Udupi: ಮುದರಂಗಡಿ ಡೇವಿಡ್ ಹತ್ಯೆ ಪ್ರಕರಣ - ಬೈಂದೂರಿನಲ್ಲಿ ಕಾದಾಟ, ಪ್ರಮುಖ ಆರೋಪಿಯ ಕಾಲಿಗೆ ಪೊಲೀಸ್ ಗುಂಡೇಟು ಉಡುಪಿ

ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದ ಪ್ರಮುಖ ಶೂಟರ್‌ಗೆ ಪೊಲೀಸರು ಗುಂಡೇಟು ನೀಡಿ ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಗಡಿಭಾಗ ಬೈಂದೂರಿನ ಒತ್ತಿನಣೆ ಸಮೀಪ ನಡೆದಿದೆ.

ಉತ್ತರ ಪ್ರದೇಶ ಮೂಲದ ಶೂಟರ್ ರಾಜು ಎಂಬಾತನ ಬಲಗಾಲಿಗೆ ಪೊಲೀಸರು ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳು ಬೈಂದೂರಿನಲ್ಲಿ ಅಡಗಿರುವ ಕುರಿತು ನಿಖರ ಮಾಹಿತಿ ಲಭ್ಯವಾಗುತ್ತಿದ್ದಂತೆ, ಸಬ್-ಇನ್ಸ್‌ಪೆಕ್ಟರ್‌ಗಳಾದ ತೇಜಸ್ವಿ ಹಾಗೂ ಪ್ರಸನ್ನ ಅವರ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆಗೆ ಧಾವಿಸಿತ್ತು.

ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ದಿಢೀರ್ ದಾಳಿ ನಡೆಸಿದ್ದಾರೆ. ಸ್ಥಿತಿಯನ್ನು ನಿಯಂತ್ರಿಸಲು ಹಾಗೂ ಆತ್ಮರಕ್ಷಣೆಗಾಗಿ ಅಧಿಕಾರಿಗಳು ಫೈರಿಂಗ್ ನಡೆಸಿದ್ದು, ಪರಿಣಾಮವಾಗಿ ಆರೋಪಿ ರಾಜು ಗಾಯಗೊಂಡಿದ್ದಾನೆ. ಈ ಹಲ್ಲೆಯ ಸಂದರ್ಭದಲ್ಲಿ ಎಸ್‌ಐ ತೇಜಸ್ವಿ ಅವರಿಗೂ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಗುಂಡೇಟಿನಿಂದ ಗಾಯಗೊಂಡ ಆರೋಪಿ ರಾಜುನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಿಂದ ತಪ್ಪಿಸಿಕೊಂಡಿರುವ ಇಬ್ಬರು ಸಹಚರರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.



image