
ಉಡುಪಿ: ಕಾಪು ತಾಲೂಕಿನ ಮುದರಂಗಡಿಯಲ್ಲಿ ನಡೆದಿದ್ದ ಉದ್ಯಮಿ ಡೇವಿಡ್ ಡಿಸೋಜ ಹತ್ಯೆ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ಉಡುಪಿ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂವರು ಅಂತರರಾಜ್ಯ ಸುಪಾರಿ ಕಿಲ್ಲರ್‌ಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧನದ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ ಪ್ರಮುಖ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.
ಕಚೇರಿ ಮುಂಭಾಗದಲ್ಲೇ ನಡೆಯಿತು ಭೀಕರ ಹತ್ಯೆ
ಆಗಸ್ಟ್ 7ರಂದು ಮಧ್ಯಾಹ್ನ ಸುಮಾರು 3:45ರ ವೇಳೆಗೆ ಮುದರಂಗಡಿಯ ಸೆಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿರುವ ಪ್ರಿನ್ಸ್ ಎಂಟರ್‌ಪ್ರೈಸಸ್ ಮಾಲೀಕ ಡೇವಿಡ್ ಡಿಸೋಜ ಅವರು ಕಚೇರಿಯಿಂದ ಹೊರಬಂದು ತಮ್ಮ ಥಾರ್ ವಾಹನದತ್ತ ತೆರಳುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ತಲೆಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಸ್ಥಳದಿಂದ ಕಾಲ್ಕಿತ್ತಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಡೇವಿಡ್ ಅವರನ್ನು ತಕ್ಷಣವೇ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಕೊನೆಯುಸಿರೆಳೆದಿರುವುದಾಗಿ ದೃಢಪಡಿಸಿದ್ದರು. ಘಟನೆ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೈಂದೂರಿನಲ್ಲಿ ಎನ್‌ಕೌಂಟರ್: ಪಿಎಸ್‌ಐ ಮೇಲೆ ಶೂಟೌಟ್‌ಗೆ ಯತ್ನಿಸಿದ ಆರೋಪಿ
ವಿಚಾರಣೆ ತೀವ್ರಗೊಳಿಸಿದ ಪೊಲೀಸ್ ತನಿಖಾ ತಂಡಕ್ಕೆ ಆರೋಪಿಗಳು ಬಸ್ ಮೂಲಕ ಭಟ್ಕಳದತ್ತ ಕಾಲ್ಕಿತ್ತಿರುವ ಸೌಂಡ್ ಸುಳಿವು ಸಿಕ್ಕಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬೈಂದೂರಿನ ಒತ್ತಿನಾಣೆ ಬಳಿ ಬಸ್ಸನ್ನು ತಡೆದು ಶೋಧ ನಡೆಸಿದರು. ಈ ವೇಳೆ ಸಿಕ್ಕಿಬೀಳುವ ಭೀತಿಯಿಂದ ಆರೋಪಿಗಳು ಬಸ್ಸಿನಿಂದ ಜಿಗಿದು ಓಡಲಾರಂಭಿಸಿದರು.
ಅವರನ್ನು ಬೆನ್ನಟ್ಟಿದ ಕಾಪು ಪಿ.ಎಸ್.ಐ. ತೇಜಸ್ವಿ ಅವರನ್ನು ತಳ್ಳಿ, ರಿವಾಲ್ವರ್‌ನಿಂದ ಗುಂಡು ಹಾರಿಸಲು ಯತ್ನಿಸಿದ ಉತ್ತರ ಪ್ರದೇಶ ಮೂಲದ ಮುಖ್ಯ ಶೂಟರ್ ರಾಜು (42) ಎಂಬಾತನ ಕಾಲಿಗೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ವಶಕ್ಕೆ ಪಡೆದರು. ಈ ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮತ್ತೊಂದು ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ.
ಕುಮಟಾ ಮತ್ತು ಭಟ್ಕಳದಲ್ಲಿ ಸಹಚರರ ಸೆರೆ
ಇನ್ನು ಕಾರ್ಯಾಚರಣೆಯನ್ನು ಮುಂದುವರಿಸಿದ ಪೊಲೀಸರು ಉತ್ತರಖಂಡ ಮೂಲದ ಅಜಯ್ ರಸ್ತೋಗಿ ಅಲಿಯಾಸ್ ಅನ್ಮೋಲ್ (23) ಎಂಬಾತನನ್ನು ಕುಮಟಾದಲ್ಲಿ ಹಾಗೂ ಬಿಹಾರ ಮೂಲದ ಜಿಯಾಹುಲ್ ವಜೂಲ್ ಶೇಕ್ ಅಲಿಯಾಸ್ ದೀಪಕ್ (38) ಎಂಬಾತನನ್ನು ಭಟ್ಕಳದಲ್ಲಿ ಸ್ಥಳೀಯ ಪೊಲೀಸರ ನೆರವಿನಿಂದ ಬಂಧಿಸಿದ್ದಾರೆ. ಕೃತ್ಯ ಎಸಗಿದ ಬಳಿಕ ಎರ್ಮಾಲ್‌ನಲ್ಲಿ ಬಿಟ್ಟು ಹೋಗಿದ್ದ ಮೋಟಾರು ಸೈಕಲನ್ನು ಜಪ್ತಿ ಮಾಡಲಾಗಿದೆ.
ಹಣಕಾಸಿನ ವೈಷಮ್ಯ: ಅನ್ಯ ರಾಜ್ಯದ ಕಂಪನಿಯಿಂದ ಸುಪಾರಿ?
ಮೃತ ಡೇವಿಡ್ ಡಿಸೋಜ ಅವರು ನಡೆಸುತ್ತಿದ್ದ ಕಾಮಗಾರಿಗೆ ಸಂಬಂಧಿಸಿದಂತೆ ಅನ್ಯ ರಾಜ್ಯದ ಸಂಸ್ಥೆಯೊಂದರ ಜೊತೆ ಹಣಕಾಸಿನ ಗಂಭೀರ ವಹಿವಾಟು ಹಾಗೂ ವೈಮನಸ್ಸು ಇತ್ತು ಎನ್ನಲಾಗಿದೆ. ಇದೇ ದ್ವೇಷದ ಹಿನ್ನೆಲೆಯಲ್ಲಿ ಆ ಕಂಪನಿಯು ಅಂತರರಾಜ್ಯ ಸುಪಾರಿ ಕಿಲ್ಲರ್‌ಗಳನ್ನು ಬಳಸಿ ಈ ಭೀಕರ ಕೃತ್ಯ ಎಸಗಿರುವುದು ಆರಂಭಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೃತ್ಯಕ್ಕೆ ಆಶ್ರಯ ಹಾಗೂ ಹಣಕಾಸಿನ ನೆರವು ನೀಡಿದ ಇತರ ಜಾಲದ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ: ತನಿಖೆ ಚುರುಕು
ಕಾರ್ಯಾಚರಣೆ ವೇಳೆ ಗಾಯಗೊಂಡ ಕಾಪು ಪಿ.ಎಸ್.ಐ. ತೇಜಸ್ವಿ ಹಾಗೂ ಪೊಲೀಸರ ಗುಂಡೇಟಿಗೆ ಒಳಗಾದ ಆರೋಪಿ ರಾಜು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಅವರ ಸುಪರ್ದಿಯಲ್ಲಿ ಕಾಪು, ಬೈಂದೂರು, ಕುಂದಾಪುರ ವೃತ್ತ ನಿರೀಕ್ಷಕರು, ವಿವಿಧ ಠಾಣೆಗಳ ಪಿ.ಎಸ್.ಐ.ಗಳು, ಭಟ್ಕಳ-ಕುಮಟಾ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಸಿ.ಡಿ.ಆರ್. ಸೆಲ್ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.