ದಕ್ಷಿಣ ಕನ್ನಡ

ಬೆಳ್ತಂಗಡಿ : 1,000 ಚದರ ಮೀಟರ್‌ವರೆಗಿನ 'ಸಿಂಗಲ್ ಪ್ಲಾಟ್' ನಕ್ಷೆ ಮಂಜೂರಾತಿ ಅಧಿಕಾರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಿದ ಸರ್ಕಾರ



ಬೆಳ್ತಂಗಡಿ: ಸಣ್ಣ ಆಸ್ತಿ ಮಾಲೀಕರು ಹಾಗೂ ಸಾಮಾನ್ಯ ನಾಗರಿಕರು ಮನೆ ಅಥವಾ ಕಟ್ಟಡ ನಿರ್ಮಾಣದ ನಕ್ಷೆ (Building Plan) ಮಂಜೂರಾತಿಗಾಗಿ ಕಚೇರಿಗಳಿಂದ ಕಚೇರಿಗಳಿಗೆ ಅಲೆಯುವ ತೊಂದರೆಗೆ ಕೊನೆಗೂ ತೆರೆಬಿದ್ದಿದೆ. 1,000 ಚದರ ಮೀಟರ್‌ವರೆಗಿನ "ಒಂದೇ ನಿವೇಶನ" (Single Plot) ನಕ್ಷೆ ಮಂಜೂರಾತಿ ನೀಡುವ ಪ್ರಮುಖ ಅಧಿಕಾರವನ್ನು ಸ್ಥಳೀಯಾಡಳಿತ ಸಂಸ್ಥೆಗಳಿಗೆ ವಿಕೇಂದ್ರೀಕರಿಸಿ ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

​ಈ ಕುರಿತು ಸೆಪ್ಟೆಂಬರ್ 24ರಂದು ನೂತನ ಅಧಿಸೂಚನೆ ಹೊರಡಿಸಲಾಗಿದ್ದು, ಇನ್ಮುಂದೆ ಮಹಾನಗರ ಪಾಲಿಕೆಗಳ ವಲಯ ಆಯುಕ್ತರು, ನಗರಸಭೆ ಆಯುಕ್ತರು, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳು ಮತ್ತು ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಈ ನಕ್ಷೆ ಅನುಮೋದಿಸುವ ಅಧಿಕಾರ ಸಿಕ್ಕಂತಾಗಿದೆ.

​ಜನರ ಅಲೆದಾಟಕ್ಕೆ ಮುಕ್ತಿ:

ಇಲ್ಲಿಯವರೆಗೆ ಸಣ್ಣ ಪ್ರಮಾಣದ ನಿವೇಶನಗಳಲ್ಲಿ ಮನೆ ಕಟ್ಟಿಕೊಳ್ಳಲು ಅಥವಾ ಲೇಔಟ್ ನಕ್ಷೆ ಮಂಜೂರಾತಿ ಪಡೆಯಲು ಜನರು ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಅಲೆದಾಡಬೇಕಿತ್ತು. ಅಷ್ಟೇ ಅಲ್ಲದೆ, ಕೆಂಪು ಪಟ್ಟಿಯ ಕಿರುಕುಳ ಹಾಗೂ ವಿಳಂಬ ನೀತಿಯಿಂದಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಈ ಹೊಸ ನಿರ್ಧಾರದಿಂದಾಗಿ ಆಡಳಿತ ಪ್ರಕ್ರಿಯೆ ಸರಳೀಕರಣಗೊಂಡಿದ್ದು, ಸಾರ್ವಜನಿಕರ ಬಾಗಿಲಿಗೆ ಸೇವೆ ತಲುಪಿದಂತಾಗಿದೆ.

​ಈ ನಿಯಮಾವಳಿ ಬದಲಾವಣೆಯು ರಾಜ್ಯದ ಲಕ್ಷಾಂತರ ಸಾಮಾನ್ಯ ನಾಗರಿಕರಿಗೆ, ಸಣ್ಣ ಆಸ್ತಿ ಮಾಲೀಕರಿಗೆ ಹಾಗೂ ಉದ್ಯಮಿಗಳಿಗೆ ದೊಡ್ಡ ಮಟ್ಟದ ಶ್ರಮ ಮತ್ತು ಸಮಯವನ್ನು ಉಳಿಸಲಿದ್ದು, ಶೀಘ್ರ ಪರಿಹಾರ ಸಿಗಲಿದೆ. ಆಡಳಿತ ಯಂತ್ರದಲ್ಲಿನ ಈ ಸುಧಾರಣೆಯು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.



image