ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಆಲಂದಿಲ ಎಂಬಲ್ಲಿ ಮನೆಯವರೆಲ್ಲ ಸಂಬಂಧಿಕರ ಗೃಹಪ್ರವೇಶ ಸಮಾರಂಭಕ್ಕೆ ತೆರಳಿದ್ದ ಸಮಯವನ್ನು ಕಾದಿದ್ದ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಆಲಂದಿಲ ನಿವಾಸಿ ನೌಫಾಲ್ ಬಿ.ಎಂ. (34) ಎಂಬುವವರು ತಮ್ಮ ಮನೆಯಲ್ಲಾದ ಈ ಭಾರಿ ಕಳವಿನ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.
ಘಟನೆಯ ವಿವರ:
ಸೆಪ್ಟೆಂಬರ್ 13ರಂದು ನೌಫಾಲ್ ಅವರು ತಮ್ಮ ಪತ್ನಿ, ಮಕ್ಕಳು ಮತ್ತು ತಾಯಿಯನ್ನು ಸಂಬಂಧಿಕರ ಮನೆ ಶುಭಕಾರ್ಯಕ್ಕೆ ಕಳುಹಿಸಿಕೊಟ್ಟಿದ್ದರು. ಬಳಿಕ ಮನೆಗೆ ಬೀಗ ಹಾಕಿ, ತಾವು ತರಕಾರಿ ವ್ಯಾಪಾರದ ನಿಮಿತ್ತ ಬೆಳ್ತಂಗಡಿಗೆ ತೆರಳಿದ್ದರು.
ಇದೇ ವೇಳೆ ಸೆಪ್ಟೆಂಬರ್ 14ರಂದು ಮನೆಯಲ್ಲಿ ವಯರಿಂಗ್ ಕೆಲಸ ನಿಗದಿಯಾಗಿದ್ದು, ಮದ್ದಡ್ಕದ ಫಾರೂಕ್ ಎಂಬವರು ಕುದ್ರಡ್ಕದ ಅಶ್ರಫ್ ಹಾಗೂ ಶಿರ್ಲಾಲಿನ ಸುಲೈಮಾನ್ ಎಂಬಿಬ್ಬರನ್ನು ಕರೆದುಕೊಂಡು ಬಂದು ಕೆಲಸ ಮಾಡಿಸುತ್ತಿದ್ದರು. ಈ ಸಮಯದಲ್ಲಿ ನೌಫಾಲ್ ಅವರ ಸಹೋದರ ಮಹಮ್ಮದ್ ನೌಷಾದ್ ಮನೆಯಲ್ಲಿ ಹಾಜರಿದ್ದರು.
₹15.82 ಲಕ್ಷ ಒಡವೆ, ₹1.80 ಲಕ್ಷ ಕ್ಯಾಶ್ ಗಾಯಬ್:
ಅಂದು ರಾತ್ರಿ ಸುಮಾರು 8:30ರ ವೇಳೆಗೆ ಕುಟುಂಬಸ್ಥರು ಮನೆಗೆ ಮರಳಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮಲಗುವ ಕೋಣೆಯ ಕಪಾಟನ್ನು ಪರಿಶೀಲಿಸಿದಾಗ ಅದರಲ್ಲಿದ್ದ ಒಡವೆಯ ಬಾಕ್ಸ್ ಮಾಯವಾಗಿತ್ತು. ಕಪಾಟಿನಲ್ಲಿದ್ದ 32 ಗ್ರಾಂ ಮತ್ತು 26 ಗ್ರಾಂ ತೂಕದ ಎರಡು ಚಿನ್ನದ ಸರಗಳು, ಮಗುವಿನ ಸರ, ಕಾಲುಚೈನು, ಬ್ರೇಸ್‌ಲೇಟ್ ಸೇರಿದಂತೆ ಒಟ್ಟು 113 ಗ್ರಾಂ ತೂಕದ (ಅಂದಾಜು ಮೌಲ್ಯ ₹15.82 ಲಕ್ಷ) ಚಿನ್ನಾಭರಣ ಹಾಗೂ ₹1.80 ಲಕ್ಷ ನಗದು ಕಳುವಾಗಿತ್ತು. ಜೊತೆಗೆ ನೌಫಾಲ್ ಅವರ ತಾಯಿಗೆ ಸೇರಿದ 7 ಗ್ರಾಂ ತೂಕದ ಮೂರು ಚಿನ್ನದ ಉಂಗುರಗಳೂ ಕಾಣೆಯಾಗಿವೆ.
ವಯರಿಂಗ್ ಕೆಲಸಗಾರರ ಮೇಲೆ ಅನುಮಾನ:
ಮನೆಯಲ್ಲಿ ವಯರಿಂಗ್ ಕೆಲಸಕ್ಕಾಗಿ ಬಂದಿದ್ದ ಅಶ್ರಫ್, ಫಾರೂಕ್ ಹಾಗೂ ಸುಲೈಮಾನ್ ಅವರ ಮೇಲೆಯೇ ತಮಗೆ ಪ್ರಬಲ ಅನುಮಾನವಿರುವುದಾಗಿ ನೌಫಾಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಠಾಣೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
