ರಾಜ್ಯ

ಬೆಂಗಳೂರು : ಇಂಜಿನಿಯರ್ ಪ್ರಸನ್ನ ದರ್ಬೆ ಅವರಿಗೆ ‘ಎಮಿನೆಂಟ್ ಇಂಜಿನಿಯರ್-2026’ ಗೌರವ: ಕನ್ನಡಪ್ರಭ, ಏಷಿಯಾನೆಟ್ ಸುವರ್ಣನ್ಯೂಸ್ ಸಂಸ್ಥೆಯಿಂದ ಪ್ರಶಸ್ತಿ ಪ್ರದಾನ



ಬೆಂಗಳೂರು / ಪುತ್ತೂರು: ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿರುವ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ತಾಂತ್ರಿಕ ತಜ್ಞ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಕೋಷ್ಠ ಸಹ ಸಂಚಾಲಕ ಇಂಜಿನಿಯರ್ ಪ್ರಸನ್ನ ದರ್ಬೆ ಅವರಿಗೆ ‘ಎಮಿನೆಂಟ್ ಇಂಜಿನಿಯರ್-2026’ ಪ್ರಶಸ್ತಿ ಒಲಿದಿದೆ.

​ಸಾಧಕರ ಸೇವೆಯನ್ನು ಗುರುತಿಸಿ ಕನ್ನಡಪ್ರಭ ಹಾಗೂ ಏಷಿಯಾನೆಟ್ ಸುವರ್ಣನ್ಯೂಸ್ ಮಾಧ್ಯಮ ಸಮೂಹದ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 26ರ ಶನಿವಾರದಂದು ಬೆಂಗಳೂರಿನ ತಾಜ್ ಯಶವಂತಪುರ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

​ದಿಗ್ಗಜರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ:

ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್, ಖ್ಯಾತ ನಟಿ ಬೃಂದಾ ಆಚಾರ್ಯ, ದುಬೈನ ಪರ್ವ ಗ್ರೂಪ್ ಸಂಸ್ಥಾಪಕ ನೀಲೇಶ್ ಎಚ್.ಪಿ. ಹಾಗೂ ಕನ್ನಡಪ್ರಭ-ಏಷಿಯಾನೆಟ್ ಸುವರ್ಣನ್ಯೂಸ್ ಸಮೂಹ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಪ್ರಸನ್ನ ದರ್ಬೆ ಅವರ ಸಾಧನೆಯನ್ನು ಶ್ಲಾಘಿಸಿದರು.

​ಶಿಕ್ಷಣ ಮತ್ತು ತಾಂತ್ರಿಕ ಪ್ರಯಾಣ:

ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ದರ್ಬೆ ಮೂಲದವರಾದ ಪ್ರಸನ್ನ ಅವರು ಉಪ್ಪಿನಂಗಡಿಯಲ್ಲಿ ಶಾಲಾ ಶಿಕ್ಷಣ ಮುಗಿಸಿ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಹಾಗೂ ಡಿಪ್ಲೊಮಾ ಪೂರೈಸಿದರು. ಬಳಿಕ ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡರು.

​


ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅಪಾರ ಕೊಡುಗೆ:

೨೦೧೩ರಿಂದ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಲ್ಲಿ (KRDCL) ಸೇವೆ ಸಲ್ಲಿಸಿದ ಇವರು, ಕರಾವಳಿ ಭಾಗದ ಸಂಪರ್ಕ ಕೊಂಡಿಗಳಾದ ಕುಕ್ಕೆ ಸುಬ್ರಹ್ಮಣ್ಯ, ಹೊಸಮಠ, ಉದನೆ, ಕಡೇಶಿವಾಲ್ಯ-ಅಜಿಲಮೊಗ್ರು, ಪಾಲೋಲಿ, ಕನ್ನಡಕುದ್ರು, ಹೆಜಮಾಡಿ ಹಾಗೂ ಬೆಳ್ವೆ ಸೇರಿದಂತೆ ಹಲವು ಪ್ರಮುಖ ಸೇತುವೆಗಳ ವಿನ್ಯಾಸ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ (Exit) ರಸ್ತೆಯ ವಿನ್ಯಾಸದಲ್ಲೂ ಇವರ ಕೊಡುಗೆಯಿದೆ.

​೨೦೧೮ರಲ್ಲಿ ನಡೆದ ಶ್ರವಣಬೆಳಗೊಳದ ಐತಿಹಾಸಿಕ ಮಹಾಮಸ್ತಕಾಭಿಷೇಕದ ವೇಳೆ ತಾತ್ಕಾಲಿಕ ನಗರ ನಿರ್ಮಾಣದ ಮುಖ್ಯ ಇಂಜಿನಿಯರ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ, ಸರ್ಕಾರ ಹಾಗೂ ಜೈನ ಮಠದಿಂದ ಗೌರವ-ಸನ್ಮಾನಗಳಿಗೆ ಪಾತ್ರರಾಗಿದ್ದರು.

​ಸ್ವಂತ ಉದ್ಯಮ ಮತ್ತು ಪ್ರಸ್ತುತ ಜವಾಬ್ದಾರಿ:

೨೦೧೯ರಲ್ಲಿ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಪ್ರಸನ್ನ ದರ್ಬೆ, ಸ್ವಂತ ಕನ್ಸಲ್ಟೆನ್ಸಿ ಆರಂಭಿಸಿದರು. ಪ್ರಸ್ತುತ ರಾಜ್ಯ ಸರ್ಕಾರದ ಎಂಪನ್ನೆಲ್ಡ್ ಸ್ಟ್ರಕ್ಚರಲ್ ಕನ್ಸಲ್ಟೆಂಟ್ ಇಂಜಿನಿಯರ್ ಆಗಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ಸರ್ಕಾರಿ ಕಟ್ಟಡಗಳು, ನ್ಯಾಯಾಲಯ ಸಂಕೀರ್ಣಗಳು, ವಸತಿಗೃಹಗಳು ಮತ್ತು ಸುಸಜ್ಜಿತ ನಿರೀಕ್ಷಣಾ ಭವನಗಳ ವಿನ್ಯಾಸಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

​


ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರ:

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನಿಷ್ಠಾವಂತ ಸ್ವಯಂಸೇವಕರಾಗಿರುವ ಇವರು, ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿಯೂ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪ್ರಸ್ತುತ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕರಾಗಿ ಶೈಕ್ಷಣಿಕ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ.



image