ಬಂಟ್ವಾಳ: "ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೆತ್ತವರು ತಮ್ಮ ಜೀವನವನ್ನೇ ಧಾರೆ ಎರೆಯುತ್ತಾರೆ. ಅಂತಹ ತಂದೆ-ತಾಯಿಯರ ಶ್ರಮವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಎಂದಿಗೂ ಮರೆಯಬಾರದು. ಹೆತ್ತವರೇ ನಮಗೆ ಪ್ರತ್ಯಕ್ಷ ದೇವರು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು" ಎಂದು ಖ್ಯಾತ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟ ನವೀನ್ ಡಿ. ಪಡೀಲ್ ಕರೆ ನೀಡಿದರು.
ಇಲ್ಲಿನ ಬಿ.ಸಿ. ರೋಡ್‌ನ ಸ್ಪರ್ಶ ಕಲಾಮಂದಿರದಲ್ಲಿ ಬುಧವಾರ ಎಂಐಟಿಇ (MITE) ಟೆಕ್ನಿಕಲ್ ಆಂಡ್ ಪ್ರೊಫೆಶನಲ್ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ "ಮೈಟ್ ಫೆಸ್ಟ್ 2ಕೆ26" ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಕೊಡುಗೆಯನ್ನು ಸ್ಮರಿಸಿದ ಅವರು, "ರಾಕೇಶ್ ಕುಮಾರ್ ಅವರ ಸಾರಥ್ಯದಲ್ಲಿ ಎಂಐಟಿಇ ಕಾಲೇಜು ಕಳೆದ 25 ವರ್ಷಗಳಿಂದ ಯುವಜನತೆಗೆ ಗುಣಮಟ್ಟದ ವೃತ್ತಿಪರ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಶಾಲಾ-ಕಾಲೇಜುಗಳಲ್ಲಿ ಕಲಿಯುವಾಗ ವಿದ್ಯಾರ್ಥಿಗಳು ಜಾತಿ-ಧರ್ಮದ ಭೇದಭಾವ ಮರೆತು ಐಕ್ಯತೆಯಿಂದ ಬಾಳಬೇಕು. ಜೊತೆಗೆ ವಿದ್ಯೆ ಕಲಿಸಿದ ಗುರುಗಳನ್ನು ಸದಾ ಗೌರವಿಸಬೇಕು" ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶುಭ ಹಾರೈಸಿ ಮಾತನಾಡಿದ ಚಿತ್ರನಟಿ, ರೂಪದರ್ಶಿ ಸವಿತಾ ಆಂಚನ್ ಹಾಗೂ ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಅವರು ಕಾಲೇಜಿನ ಶೈಕ್ಷಣಿಕ ಸಾಧನೆಯನ್ನು ಕೊಂಡಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಂಐಟಿಇ ಸಂಸ್ಥೆಯ ಅಧ್ಯಕ್ಷ ರಾಕೇಶ್ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕಿ ನಿಶ್ಮಿತ ರಾಕೇಶ್ ಕುಮಾರ್, ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಅಶ್ರಫ್, ಗೀತಾ ಹಾಗೂ ವಿದ್ಯಾರ್ಥಿ ನಾಯಕರಾದ ವಿಕ್ರಂ ಮತ್ತು ದಿಶಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಮಹಿಮಾ ಸ್ವಾಗತಿಸಿ, ಕಲಾತ್ಮಕವಾಗಿ ನಿರೂಪಿಸಿದರು. ಭವ್ಯಶ್ರೀ ಹಾಗೂ ಶಾಂತೇರಿ ಶೆಣೈ ಆಗಮಿಸಿದ ಅಭ್ಯಾಗತರನ್ನು ಸಭೆಗೆ ಪರಿಚಯಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

