ದಕ್ಷಿಣ ಕನ್ನಡ

ಬೆಳ್ತಂಗಡಿ : ಪಣಕಜೆ ಮಸೀದಿ ಬಳಿ ಭೀಕರ ರಸ್ತೆ ಅಪಘಾತ – ಚಿಕಿತ್ಸೆ ಫಲಿಸದೆ 23 ವರ್ಷದ ಬೈಕ್ ಸವಾರ ಸಾವು!



ಬೆಳ್ತಂಗಡಿ: ತಾಲೂಕಿನ ಪಣಕಜೆ ಮಸೀದಿ ಸಮೀಪ ಟೆಂಪೋ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.ಸ್ಥಳೀಯ ಮಲೆಬೆಟ್ಟು ನಿವಾಸಿ ರಿನ್ಸ್ ಶಿಬಿ (23) ದುರಂತದಲ್ಲಿ ಮೃತಪಟ್ಟ ಬೈಕ್ ಸವಾರ.

ಘಟನೆಯ ವಿವರ:

ಮಡಂತ್ಯಾರು ಕಡೆಯಿಂದ ಬರುತ್ತಿದ್ದ ಟೆಂಪೋ ಚಾಲಕ, ಪಣಕಜೆ ಮಸೀದಿ ಬಳಿ ಟೀ ಕುಡಿಯುವ ಸಲುವಾಗಿ ವಾಹನವನ್ನು ರಸ್ತೆಬದಿ ನಿಲ್ಲಿಸಿದ್ದರೆನ್ನಲಾಗಿದೆ. ಈ ವೇಳೆ ಅದೇ ಮಾರ್ಗವಾಗಿ ಬಂದ ಬೈಕ್ ಸವಾರನ ನಿಯಂತ್ರಣ ತಪ್ಪಿ, ನಿಂತಿದ್ದ ಟೆಂಪೋದ ಹಿಂಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆದು,ಡಿಕ್ಕಿಯ ಭರಕ್ಕೆ ಬೈಕ್ ರಸ್ತೆಗೆ ಪಲ್ಟಿಯಾಗಿದ್ದು, ಸವಾರ ರಿನ್ಸ್ ಶಿಬಿ ಅವರಿಗೆ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿತ್ತು.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣವೇ ಸ್ಪಂದಿಸಿ, ಗಾಯಾಳುವನ್ನು ಉಜಿರೆಯ ಬೆನಕ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗಾಗಿ ದಾಖಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತಾದರೂ, ತೀವ್ರ ರಕ್ತಸ್ರಾವದಿಂದಾಗಿ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



image