ಬೆಳ್ತಂಗಡಿ: ಗ್ರಾಮೀಣ ಪ್ರದೇಶದ ಸಾರ್ವಜನಿಕರ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರ ಕೈಗೊಂಡಿರುವ ಮಹತ್ವದ ನಿರ್ಧಾರವೊಂದನ್ನು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ಗ್ರಾಮೀಣ) ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ನಿಡ್ಲೆ ತೀವ್ರವಾಗಿ ಸ್ವಾಗತಿಸಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 1000 ಚದರ ಮೀಟರ್ (ಸುಮಾರು 25 ಸೆಂಟ್ಸ್) ವರೆಗಿನ ಏಕ ನಿವೇಶನ (Single Plot / Layout) ನಕ್ಷೆ ಮತ್ತು ಲೇಔಟ್‌ಗಳಿಗೆ ಅನುಮೋದನೆ ನೀಡುವ ಪೂರ್ಣ ಅಧಿಕಾರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಹಸ್ತಾಂತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಕ್ರಮಕ್ಕೆ ಕೃತಜ್ಞತೆ:
ಈ ಕುರಿತು ಪ್ರತಿಕ್ರಿಯಿಸಿರುವ ನಾಗೇಶ್ ಕುಮಾರ್ ಗೌಡ, "ಈ ಹಿಂದೆ ಸಣ್ಣಪುಟ್ಟ ನಿವೇಶನಗಳ ಅನುಮೋದನೆಗಾಗಿ ಗ್ರಾಮೀಣ ಭಾಗದ ಜನರು, ರೈತರು ಮತ್ತು ಕೂಲಿ ಕಾರ್ಮಿಕರು ತಾಲೂಕು ಹಾಗೂ ಜಿಲ್ಲಾ ಮಟ್ಟದ ವಿವಿಧ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾಗಿತ್ತು. ಇದರಿಂದ ಸಾರ್ವಜನಿಕರ ಸಮಯ ಹಾಗೂ ಹಣ ಪೋಲಾಗುತ್ತಿತ್ತು. ಇದೀಗ ಸ್ಥಳೀಯ ಮಟ್ಟದಲ್ಲೇ ತ್ವರಿತ ಸೇವೆ ಸಿಗುವಂತಾಗಿರುವುದು ಗ್ರಾಮೀಣ ಜನರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ" ಎಂದಿದ್ದಾರೆ.
ಮಧ್ಯವರ್ತಿಗಳ ಹಾವಳಿಗೆ ಬ್ರೇಕ್:
ಅಧಿಕಾರ ವಿಕೇಂದ್ರೀಕರಣದ ಈ ನಿರ್ಧಾರದಿಂದಾಗಿ ಕಚೇರಿ ಅಲೆದಾಟ ತಪ್ಪುವುದಲ್ಲದೆ, ಮಧ್ಯವರ್ತಿಗಳ ಹಾವಳಿಗೂ ಸಂಪೂರ್ಣ ತೆರೆಬೀಳಲಿದೆ. ಸಣ್ಣ ಪ್ರಮಾಣದ ಜಾಗ ಹೊಂದಿರುವ ಬಡ ಮತ್ತು ಮಧ್ಯಮ ವರ್ಗದ ನಾಗರಿಕರಿಗೆ ಸರ್ಕಾರದ ಈ ಸರಳೀಕೃತ ನಿಯಮವು ಅತ್ಯಂತ ಅನುಕೂಲಕರವಾಗಿದೆ. ಜನಸಾಮಾನ್ಯರ ಆಡಳಿತಾತ್ಮಕ ತೊಡಕುಗಳನ್ನು ಗ್ರಹಿಸಿ, ತಕ್ಷಣ ಸ್ಪಂದಿಸಿರುವ ರಾಜ್ಯ ಸರ್ಕಾರಕ್ಕೆ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
