ದಕ್ಷಿಣ ಕನ್ನಡ

ಮಂಗಳೂರು: ತುಳು ಭಾಷಿಕರ ದಶಕಗಳ ಕನಸು ನನಸಾಗುವ ಕ್ಷಣ: ಶೀಘ್ರದಲ್ಲೇ ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ‘ತುಳು’ ಘೋಷಣೆ?



ಮಂಗಳೂರು: ಕರಾವಳಿ ಕರ್ನಾಟಕದ ಕೋಟ್ಯಂತರ ತುಳು ಭಾಷಿಕರ ಸತತ ಹೋರಾಟ, ಸಾಂಸ್ಕೃತಿಕ ಜಾಗೃತಿ ಹಾಗೂ ಸೋಷಿಯಲ್ ಮೀಡಿಯಾ ಅಭಿಯಾನಗಳಿಗೆ ಕೊನೆಗೂ ದೊಡ್ಡಮಟ್ಟದ ಜಯ ಸಿಗುವ ಮುನ್ಸೂಚನೆ ಲಭಿಸಿದೆ. ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಲು ರಾಜ್ಯ ಸರ್ಕಾರ ಸಕಲ ಸಿದ್ಧತೆ ನಡೆಸುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ಪ್ರಮುಖ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

​ಈ ಕುರಿತು ಮಾಹಿತಿ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು, ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ವಿಷಯದಲ್ಲಿ ಸರ್ಕಾರ ಅತ್ಯಂತ ಗಂಭೀರವಾಗಿದ್ದು, ಕಾನೂನಾತ್ಮಕ ಪ್ರಕ್ರಿಯೆಗಳನ್ನು ವೇಗಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

​ತಜ್ಞರ ಸಮಿತಿ ವರದಿ ಹಾಗೂ ಸರ್ಕಾರದ ಹಂತ ಹಂತದ ಕ್ರಮಗಳು:

  • ​ಆಳ್ವ ಸಮಿತಿ ವರದಿ: ತುಳು ಭಾಷೆಯ ಇತಿಹಾಸ, ಲಿಪಿ, ಸಾಹಿತ್ಯಿಕ ಶ್ರೀಮಂತಿಕೆ ಹಾಗೂ ಶಾಸನಗಳ ಕುರಿತು ಅಧ್ಯಯನ ನಡೆಸಲು ಡಾ. ಎಂ. ಮೋಹನ್ ಆಳ್ವ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ತಜ್ಞರ ಸಮಿತಿಯು 2023ರ ಫೆಬ್ರವರಿ 14 ರಂದು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿತ್ತು.
  • ​ನೆರೆ ರಾಜ್ಯಗಳ ಮಾದರಿ ಅಧ್ಯಯನ: ಇತರ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ನೀಡಿರುವ ಎರಡನೇ ಅಧಿಕೃತ ಭಾಷೆಯ ಮಾದರಿಯನ್ನು ಪರಿಶೀಲಿಸಲು 2025ರ ಜುಲೈನಲ್ಲಿ ಅಧ್ಯಯನ ತಂಡವೊಂದನ್ನು ನೇಮಿಸಲಾಗಿತ್ತು.
  • ​ಆಂಧ್ರಪ್ರದೇಶ ಪ್ರವಾಸ ಹಾಗೂ ವರದಿ ಸಲ್ಲಿಕೆ: ಈ ಅಧ್ಯಯನ ತಂಡವು 2026ರ ಜನವರಿಯಲ್ಲಿ ಆಂಧ್ರಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಅಧಿಕೃತ ಭಾಷಾ ಕಾಯ್ದೆ ಹಾಗೂ ಅನುಷ್ಠಾನ ವ್ಯವಸ್ಥೆಯನ್ನು ಅಭ್ಯಾಸ ಮಾಡಿ, 2026ರ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಹಸ್ತಾಂತರಿಸಿದೆ.

​‘ಜೈ ತುಳುನಾಡ್’ ಹಾಗೂ ಡಿಜಿಟಲ್ ಚಳವಳಿಗೆ ಸಂದ ಜಯ:

​ತುಳು ಭಾಷೆಯನ್ನು ಸಂವಿಧಾನದ 8ನೇ ಅನುಸೂಚಿಗೆ ಸೇರ್ಪಡೆಗೊಳಿಸಲು ಮತ್ತು ರಾಜ್ಯದಲ್ಲಿ ಅಧಿಕೃತ ಭಾಷೆಯ ಮಾನ್ಯತೆ ನೀಡಲು 'ಜೈ ತುಳುನಾಡ್' ಸೇರಿದಂತೆ ಹಲವು ಪ್ರಾದೇಶಿಕ ಒಕ್ಕೂಟಗಳು ಸುದೀರ್ಘ ಚಳವಳಿ ನಡೆಸಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಬೃಹತ್ ಅಭಿಯಾನಗಳು ಜನಪ್ರತಿನಿಧಿಗಳ ಹಾಗೂ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದವು.

​"ಜನರ ಭಾವನೆಗೆ ಗೌರವ": ಸಚಿವ ತಂಗಡಗಿ

​ತುಳು ಭಾಷೆಯ ಸಾಂಸ್ಕೃತಿಕ ಹಿರಿಮೆಯನ್ನು ಉಲ್ಲೇಖಿಸಿದ ಸಚಿವ ಶಿವರಾಜ್ ತಂಗಡಗಿ, "ತುಳು ಕೇವಲ ಕರಾವಳಿಯ ಭಾಷೆಯಷ್ಟೇ ಅಲ್ಲ, ಇಡೀ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಹೆಮ್ಮೆ. ಈ ಭಾಷೆಯ ರಕ್ಷಣೆ ಮತ್ತು ಗೌರವಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ" ಎಂದಿದ್ದಾರೆ. ಅಲ್ಲದೆ ತುಳುವಿನಲ್ಲಿ “ಯಾನ್ ಏಪಲಾ ಜನಕ್ಲೆನ ಭಾವನೆಲೆನ ಒಟ್ಟುಗು ಇಪ್ಪು” (ನಾನು ಯಾವಾಗಲೂ ಜನರ ಭಾವನೆಗಳ ಜೊತೆ ಇರುತ್ತೇನೆ) ಎಂದು ಹೇಳುವ ಮೂಲಕ ತುಳುಗರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

​ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಸೇರಿದಂತೆ ದೇಶ-ವಿದೇಶಗಳಲ್ಲಿ ಹರಡಿರುವ ಸುಮಾರು ಒಂದು ಕೋಟಿಗೂ ಅಧಿಕ ತುಳು ಭಾಷಿಕರು ಸರ್ಕಾರದ ಅಧಿಕೃತ ಪ್ರಕಟಣೆಗಾಗಿ ಎದುರು ನೋಡುತ್ತಿದ್ದಾರೆ.



image