ದಕ್ಷಿಣ ಕನ್ನಡ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 2 ದಿನ ಮದ್ಯ ಮಾರಾಟ ಬಂದ್ : ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಆದೇಶ



ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸಾರ್ವಜನಿಕ ಮೊಸರುಕುಡಿಕೆ ಉತ್ಸವಗಳ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮಂಗಳೂರು ಪೊಲೀಸ್ ಕಮಿಷನರೇಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಾದ್ಯಂತ ಎರಡು ದಿನಗಳ ಕಾಲ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಆದೇಶ ಹೊರಡಿಸಿದ್ದಾರೆ.

​ಸೆಪ್ಟೆಂಬರ್ 4 ರಿಂದ 6 ರವರೆಗೆ ಜಿಲ್ಲೆಯಾದ್ಯಂತ ವಿವಿಧೆಡೆ ವಿಜೃಂಭಣೆಯ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ, ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಹಾಗೂ ಧಾರ್ಮಿಕ ಮೆರವಣಿಗೆಗಳು ನಡೆಯಲಿವೆ. ಈ ಕಾರ್ಯಕ್ರಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.

​ಜನನಿಬಿಡ ಆಚರಣೆಗಳ ಸಂದರ್ಭದಲ್ಲಿ ಕಿಡಿಗೇಡಿಗಳು ಮದ್ಯ ಸೇವಿಸಿ ಅಶಾಂತಿ ಸೃಷ್ಟಿಸುವ ಹಾಗೂ ಅಹಿತಕರ ಘಟನೆಗಳಿಗೆ ಕಾರಣರಾಗುವ ಸಾಧ್ಯತೆಗಳಿರುತ್ತವೆ. ಇಂತಹ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಹಬ್ಬದ ವಾತಾವರಣ ಸೌಹಾರ್ದಯುತವಾಗಿ ಸಾಗುವಂತೆ ನೋಡಿಕೊಳ್ಳಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

​ಆದೇಶದಂತೆ ನಿಗದಿತ ಅವಧಿಯಲ್ಲಿ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಎಲ್ಲಾ ಬಾರ್, ವೈನ್ ಶಾಪ್, ಪಬ್ ಹಾಗೂ ಮದ್ಯ ಮಾರಾಟ ಮಳಿಗೆಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಮಂಡಳಿ ಎಚ್ಚರಿಸಿದೆ.



image