ದಕ್ಷಿಣ ಕನ್ನಡ

ಬೆಳ್ತಂಗಡಿ : ನಾರಾವಿ ವಾಲ್ಮೀಕಿ ವಸತಿ ಶಾಲೆ ಅಭಿವೃದ್ಧಿಗೆ ₹3.25 ಕೋಟಿ ಅನುದಾನ: ಶಾಸಕ ಹರೀಶ್ ಪೂಂಜ


ಬೆಳ್ತಂಗಡಿ: ತಾಲೂಕಿನ ನಾರಾವಿಯಲ್ಲಿರುವ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಶೈಕ್ಷಣಿಕ ಹಾಗೂ ಮೂಲಸೌಕರ್ಯಗಳ ಮೇಲ್ದರ್ಜೆಗೇರಿಸಲು ಡಿಎ-ಜೆಜಿಯುಎ (DA-JGUA) ಯೋಜನೆಯಡಿ ಒಟ್ಟು ₹3.25 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಹರೀಶ್ ಪೂಂಜ ಮಾಹಿತ ನೀಡಿದ್ದಾರೆ.

​ಈಗಾಗಲೇ ವಸತಿ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳ ವಸತಿ ಸೌಕರ್ಯ ವಿಸ್ತರಿಸಲು ₹2 ಕೋಟಿ ವೆಚ್ಚದಲ್ಲಿ ನೂತನ ನಿಲಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಈ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

​ಇದರ ಬೆನ್ನಲ್ಲೇ, ವಿದ್ಯಾರ್ಥಿಗಳ ಶೈಕ್ಷಣಿಕ ವಾತಾವರಣವನ್ನು ಇನ್ನಷ್ಟು ಬಲಪಡಿಸಲು ಶಾಲೆಯಲ್ಲಿ 7 ಹೊಸ ತರಗತಿ ಕೊಠಡಿಗಳ ನಿರ್ಮಾಣಕ್ಕಾಗಿ ₹2.45 ಕೋಟಿ ಅನುದಾನ ಒದಗಿಸಲಾಗಿದೆ. ಜೊತೆಗೆ ನೈರ್ಮಲ್ಯ ಹಾಗೂ ನೈರ್ಮಲ್ಯೀಕರಣಕ್ಕೆ ಆದ್ಯತೆ ನೀಡಿ, ವಿದ್ಯಾರ್ಥಿನಿಯರಿಗೆ 2 ಹಾಗೂ ವಿದ್ಯಾರ್ಥಿಗಳಿಗೆ 2 ಸೇರಿದಂತೆ ಒಟ್ಟು 4 ಶೌಚಾಲಯ ಬ್ಲಾಕ್‌ಗಳ ನಿರ್ಮಾಣಕ್ಕೆ ₹80 ಲಕ್ಷ ಕಾಯ್ದಿರಿಸಲಾಗಿದೆ. ಈ ಮೂಲಸೌಕರ್ಯ ಕಾಮಗಾರಿಗಳ ಜವಾಬ್ದಾರಿಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗೆ ವಹಿಸಲಾಗಿದೆ.

​ಈ ಯೋಜನೆಯಿಂದಾಗಿ ಗ್ರಾಮೀಣ ಹಾಗೂ ಆದಿವಾಸಿ ಬುಡಕಟ್ಟು ಪ್ರದೇಶದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸುಸಜ್ಜಿತ ವಸತಿ ಸೌಲಭ್ಯ ಸಿಗಲಿದೆ ಎಂದು ಶಾಸಕರು ತಿಳಿಸಿದರು.

​ಈ ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ಶ್ರಮಿಸಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಶಾಸಕ ಹರೀಶ್ ಪೂಂಜ ಧನ್ಯವಾದ ಅರ್ಪಿಸಿದ್ದಾರೆ.



image