ಕ್ರೈಂ

ಬೆಂಗಳೂರು: 4 ತಿಂಗಳ ಅವಳಿ ಹೆಣ್ಣು ಮಕ್ಕಳನ್ನು ಬಕೆಟ್ ನೀರಲ್ಲಿ ಮುಳುಗಿಸಿ ಕೊಂದ ತಾಯಿ! ಘೋರ ಕೃತ್ಯದ ಬಳಿಕ ಆತ್ಮಹತ್ಯೆಗೆ ಯತ್ನ



ಬೆಂಗಳೂರು: ನಾಲ್ಕು ತಿಂಗಳ ಹಸುಗೂಸುಗಳಾಗಿದ್ದ ಅವಳಿ ಹೆಣ್ಣು ಮಕ್ಕಳನ್ನು ತಾಯಿಯೇ ನೀರು ತುಂಬಿದ್ದ ಬಕೆಟ್‌ನಲ್ಲಿ ಮುಳುಗಿಸಿ ಕೊಲೆಗೈದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಎದೆನಡುಗಿಸುವ ಭೀಕರ ಘಟನೆ ನಗರದ ವಾಜರಹಳ್ಳಿಯ ಬಿಸಿಸಿಎಚ್‌ಎಸ್‌ (BCCHS) ಲೇಔಟ್‌ನಲ್ಲಿ ನಡೆದಿದೆ.

​ಉಮಾದೇವಿ (44) ಎಂಬಾಕೆಯೇ ಈ ಕೃತ್ಯ ಎಸಗಿದ ದುರ್ದೈವಿ ತಾಯಿ. ಆಕೆಯ ಪತಿ ರಾಮಲಿಂಗಪ್ಪ ನೀಡಿರುವ ದೂರಿನ ಅನ್ವಯ ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

​22 ವರ್ಷಗಳ ಕಾಯುವಿಕೆಯ ನಂತರ ಸಿಕ್ಕಿದ್ದ ಮಕ್ಕಳು:

ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ರಾಮಲಿಂಗಪ್ಪ ಹಾಗೂ ಉಮಾದೇವಿ 2002ರಲ್ಲಿ ವಿವಾಹವಾಗಿದ್ದರು. ಮದುವೆಯಾಗಿ 22 ವರ್ಷ ಗತಿಸಿದರೂ ಮಕ್ಕಳಾಗದ ಕಾರಣ ದಂಪತಿ ಕೃತಕ ಗರ್ಭಧಾರಣೆ (IVF) ಚಿಕಿತ್ಸೆ ಮೊರೆ ಹೋಗಿದ್ದರು. ಚಿಕಿತ್ಸೆ ಫಲ ನೀಡಿ ಕಳೆದ ಮೇ 5ರಂದು ಉಮಾದೇವಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು.

​ಆವರಿಸಿದ್ದ ಹೆರಿಗೆ ನಂತರದ ಖಿನ್ನತೆ (Postpartum Depression):

ಮಕ್ಕಳ ಜನನದ ನಂತರ ಉಮಾದೇವಿ ಅವರ ನಡವಳಿಕೆಯಲ್ಲಿ ದಿಢೀರ್ ವ್ಯತ್ಯಾಸಗಳು ಕಾಣಿಸಿಕೊಂಡಿದ್ದವು. ಮಕ್ಕಳ ಪಾಲನೆ-ಪೋಷಣೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದ ಅವರು, ಹಸುಗೂಸುಗಳನ್ನು ಆಶ್ರಮಕ್ಕೆ ಸೇರಿಸುವಂತೆ ಹೇಳುತ್ತಾ ವಿಚಿತ್ರವಾಗಿ ವರ್ತಿಸುತ್ತಿದ್ದರು. ಇದರಿಂದ ಕಂಗಾಲಾಗಿದ್ದ ಪತಿ ರಾಮಲಿಂಗಪ್ಪ, ಪತ್ನಿಯನ್ನು ನಿಮ್ಹಾನ್ಸ್ ಆಸ್ಪತ್ರೆಯ ಮನೋವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದರು. ಉಮಾದೇವಿ ಅವರು ಹೆರಿಗೆ ನಂತರದ ಹಾರ್ಮೋನ್ ಅಸಮತೋಲನ ಹಾಗೂ ತೀವ್ರ ಮನೋಖಿನ್ನತೆಗೆ (Postpartum Depression) ಒಳಗಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.

​ಘಟನೆ ವಿವರ:

ಮಂಗಳವಾರ ಮಧ್ಯಾಹ್ನ ಉಮಾದೇವಿ ತಮ್ಮ ಕೊಠಡಿಯ ಬಾಗಿಲು ಹಾಕಿಕೊಂಡಿದ್ದರು. ಬಹಳ ಹೊತ್ತಾದರೂ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ತೆರೆದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. 4 ತಿಂಗಳ ಹಸುಗೂಸುಗಳನ್ನು ಬಕೆಟ್ ನೀರಿಗೆ ಮುಳುಗಿಸಿ ಕೊಲೆ ಮಾಡಲಾಗಿತ್ತು. ಮತ್ತೊಂದೆಡೆ ಉಮಾದೇವಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.

​ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಉಮಾದೇವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತಲಘಟ್ಟಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



image