ದಕ್ಷಿಣ ಕನ್ನಡ

​ಮಂಗಳೂರು : ಹಾವೇರಿಯ ರೈತನ ಮಗಳ ಅದ್ಭುತ ಸಾಧನೆ: 'ವೀಸಾ' ಕಂಪನಿಯಲ್ಲಿ ವಾರ್ಷಿಕ 46.33 ಲಕ್ಷ ರೂ. ಪ್ಯಾಕೇಜ್‌ನ ಉನ್ನತ ಉದ್ಯೋಗ!



​ಮಂಗಳೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಉತ್ತಮ ವೇದಿಕೆ ಸಿಕ್ಕರೆ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಹಾವೇರಿಯ ಯುವತಿಯೊಬ್ಬರು ಸಾಬೀತುಪಡಿಸಿದ್ದಾರೆ. ಜಾಗತಿಕ ಮಟ್ಟದ ಪ್ರಸಿದ್ಧ ಡಿಜಿಟಲ್ ಪಾವತಿ ತಂತ್ರಜ್ಞಾನ ಸಂಸ್ಥೆಯಾದ 'ವೀಸಾ' (Visa) ದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಆಯ್ಕೆಯಾಗುವ ಮೂಲಕ ಹಾವೇರಿ ಮೂಲದ ರೈತನ ಮಗಳು ಬೃಹತ್ ಮೊತ್ತದ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.

​ಮೂಡುಬಿದಿರೆಯ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (AIET) ಕಾಲೇಜಿನ ಮಾಹಿತಿ ವಿಜ್ಞಾನ (Information Science) ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಸೃಷ್ಟಿ ಮಂಜುನಾಥ್ ಉಳ್ಳಾಗಡ್ಡಿ ಈ ಸಾಧನೆ ಮಾಡಿದ ಯುವತಿ. ಇವರಿಗೆ ವಾರ್ಷಿಕ 46.33 ಲಕ್ಷ ರೂಪಾಯಿ ಮೌಲ್ಯದ ಭಾರಿ ಆಫರ್ ದೊರೆತಿದ್ದು, ಇದು ಕಾಲೇಜಿನ ಇತಿಹಾಸದಲ್ಲೇ ವಿದ್ಯಾರ್ಥಿನಿಯೊಬ್ಬಳು ಪಡೆದ ಅತ್ಯಧಿಕ ಮೊತ್ತದ ಉದ್ಯೋಗಾವಕಾಶವಾಗಿದೆ.

​ಇಂಟರ್ನ್‌ಶಿಪ್‌ ಮೂಲಕ ಸಿಕ್ಕಿತು ಯಶಸ್ಸು:

​ಹಾವೇರಿ ಜಿಲ್ಲೆಯ ಹತ್ತಿಮತ್ತೂರು ಗ್ರಾಮದ ರೈತ ಮಂಜುನಾಥ್ ಹಾಗೂ ಗೃಹಿಣಿ ಸುಜಾತಾ ದಂಪತಿಯ ಪುತ್ರಿಯಾಗಿರುವ ಸೃಷ್ಟಿ, ಕಠಿಣ ಪರಿಶ್ರಮದಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ. ತಮ್ಮ 6ನೇ ಸೆಮಿಸ್ಟರ್ ಅಧ್ಯಯನದ ಅವಧಿಯಲ್ಲಿ ಸ್ಪರ್ಧಾತ್ಮಕ ಸಂದರ್ಶನದ ಮೂಲಕ 'ವೀಸಾ' ಸಂಸ್ಥೆಯಲ್ಲಿ 10 ವಾರಗಳ ಇಂಟರ್ನ್‌ಶಿಪ್‌ಗೆ ಆಯ್ಕೆಯಾಗಿದ್ದರು. ಈ ಸಮಯದಲ್ಲಿ ತಿಂಗಳಿಗೆ 90,000 ರೂಪಾಯಿ ಸ್ಟೈಫಂಡ್ ಪಡೆಯುತ್ತಿದ್ದ ಸೃಷ್ಟಿ, ತಮ್ಮ ಅತ್ಯುತ್ತಮ ಕಾರ್ಯಕ್ಷಮತೆಯಿಂದ ಸಂಸ್ಥೆಯ ಗಮನ ಸೆಳೆದಿದ್ದರು. ಪರಿಣಾಮವಾಗಿ ಸಂಸ್ಥೆಯು ಅವರಿಗೆ ಕೋರ್ಸ್ ಮುಗಿಯುವ ಮುನ್ನವೇ 'ಪೂರ್ವ-ನೇಮಕಾತಿ ಆಫರ್' (Pre-Placement Offer) ನೀಡಿದೆ.

​ಆಫರ್ ಲೆಟರ್‌ನಲ್ಲೇನಿದೆ?

​ಲಭ್ಯವಿರುವ ಮಾಹಿತಿ ಪ್ರಕಾರ, ಸೃಷ್ಟಿ ಅವರಿಗೆ ಮೂಲ ವಾರ್ಷಿಕ ವೇತನವಾಗಿ 35.58 ಲಕ್ಷ ರೂಪಾಯಿ ಸಿಗಲಿದೆ. ಇದರೊಂದಿಗೆ 7.5 ಲಕ್ಷ ರೂ. ಮೌಲ್ಯದ ಕುಟುಂಬ ವೈದ್ಯಕೀಯ ವಿಮೆ, 25,000 ರೂ. ಒಪಿಡಿ ಸೌಲಭ್ಯ, 3 ಲಕ್ಷ ರೂ.ವರೆಗಿನ ಶೈಕ್ಷಣಿಕ ಸಬ್ಸಿಡಿ, ಉಚಿತ ಕಚೇರಿ ಸಾರಿಗೆ, ಉಚಿತ ಜಿಮ್ ಹಾಗೂ ವಾರ್ಷಿಕ ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಒಟ್ಟು 46.33 ಲಕ್ಷ ರೂಪಾಯಿ ಮೌಲ್ಯದ ವಿವಿಧ ಸೌಲಭ್ಯಗಳ ಪ್ಯಾಕೇಜ್ ಲಭಿಸಿದೆ.

​ಸಾಧನೆಗೆ ಸಂಸ್ಥೆಯ ಬೆಂಬಲವೇ ಕಾರಣ:

​ತಮ್ಮ ಈ ಯಶಸ್ಸಿನ ಬಗ್ಗೆ ಸಂತಸ ಹಂಚಿಕೊಂಡ ಸೃಷ್ಟಿ, "ಆಳ್ವಾಸ್ ಸಂಸ್ಥೆಯು ಪ್ರಾಯೋಗಿಕ ಅನುಭವ ಹಾಗೂ ಇಂಟರ್ನ್‌ಶಿಪ್‌ಗಳಿಗೆ ನೀಡುವ ಆದ್ಯತೆಯೇ ನನ್ನ ಈ ಸಾಧನೆಗೆ ಮೂಲ ಕಾರಣ. ವೀಸಾ ಸಂಸ್ಥೆಯಲ್ಲಿ ಸಿಕ್ಕ ಇಂಟರ್ನ್‌ಶಿಪ್ ಅನುಭವವು ನನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು, ಕನಸಿನ ಉದ್ಯೋಗ ಪಡೆಯಲು ನೆರವಾಯಿತು" ಎಂದು ತಿಳಿಸಿದ್ದಾರೆ.

​ಡಾ. ಎಂ. ಮೋಹನ್ ಆಳ್ವಾ ಅಭಿನಂದನೆ:

​ಸೃಷ್ಟಿ ಅವರ ಈ ಹೆಮ್ಮೆಯ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವಾ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ. "ಗ್ರಾಮೀಣ ಭಾಗದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಿಗೆ ಸರಿಯಾದ ಅವಕಾಶ ಮತ್ತು ಮಾರ್ಗದರ್ಶನ ಸಿಕ್ಕರೆ, ಅವರು ಜಾಗತಿಕ ಮಟ್ಟದ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬಲ್ಲರು ಎಂಬುದಕ್ಕೆ ಸೃಷ್ಟಿಯ ಯಶಸ್ಸೇ ಉದಾಹರಣೆ" ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



image