ಬೆಳ್ತಂಗಡಿ: ತಾಲೂಕಿನ ಮೊಗ್ರು ಗ್ರಾಮದ ಜೈ ಶ್ರೀರಾಮ ಸೇವಾ ಟ್ರಸ್ಟ್ (ರಿ.) ಅಲೆಕ್ಕಿ-ಮುಗೇರಡ್ಕ ಇದರ ಆಶ್ರಯದಲ್ಲಿ ಶ್ರೀರಾಮ ಶಿಶು ಮಂದಿರದ 5ನೇ ವರ್ಷದ ಶ್ರೀ ಕೃಷ್ಣೋತ್ಸವ ಸಂಭ್ರಮವು ಸೆಪ್ಟೆಂಬರ್ 6 ರಂದು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಇದೇ ಶುಭ ಸಂದರ್ಭದಲ್ಲಿ ಮಕ್ಕಳ ಧಾರ್ಮಿಕ ಹಾಗೂ ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ನವಶಕ್ತಿ ಗುರುವಾಯನಕೆರೆ ಇವರಿಂದ ದಿ. ಕಾಶಿ ಶೆಟ್ಟಿ ಅವರ ಸ್ಮರಣಾರ್ಥ ನಿರ್ಮಿಸಲಾದ "ಕಾಶಿ ಶೆಟ್ಟಿ ವಿದ್ಯಾ ಮಂದಿರ" ಹಾಗೂ ಶಾಸಕ ಹರೀಶ್ ಪೂಂಜ ಅವರ ಶಾಸಕರ ನಿಧಿಯ ನೆರವಿನೊಂದಿಗೆ ಮಕ್ಕಳ ಅನ್ನ ಯಜ್ಞಕ್ಕಾಗಿ ನಿರ್ಮಿಸಲಾದ ನೂತನ ಅಡುಗೆ ಕೊಠಡಿಯ ಉದ್ಘಾಟನಾ ಸಮಾರಂಭ ಜರುಗಿತು.
ರೂ. 7 ಲಕ್ಷ ವೆಚ್ಚದ ನೂತನ ಕಟ್ಟಡ ಉದ್ಘಾಟನೆ:
ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ನವಶಕ್ತಿ ಗುರುವಾಯನಕೆರೆಯ ಶ್ರೀ ಶಶಿಧರ ಶೆಟ್ಟಿ ಅವರು, "ಸುಮಾರು 7 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಂಡಿದೆ. ಶ್ರೀರಾಮ ಶಿಶುಮಂದಿರವು ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಾ ಉತ್ತಮ ಶಿಸ್ತು ಹಾಗೂ ಸಂಸ್ಕಾರವನ್ನು ಕಲ್ಪಿಸುತ್ತಿರುವುದು ಶ್ಲಾಘನೀಯ. ನನ್ನ ತಾಯಿ ಕಾಶಿ ಶೆಟ್ಟಿ ಅವರ ಸ್ಮರಣಾರ್ಥ ಈ ಕೊಡುಗೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಶಿಶುಮಂದಿರದ ಅಭಿವೃದ್ಧಿ ಹಾಗೂ ಮಕ್ಕಳ ಆಟೋಟ ವ್ಯವಸ್ಥೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು" ಎಂದು ಭರವಸೆ ನೀಡಿದರು.
ಗಣ್ಯರ ಉಪಸ್ಥಿತಿ ಮತ್ತು ಸಭಾ ಕಾರ್ಯಕ್ರಮ:
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೈ ಶ್ರೀರಾಮ ಸೇವಾ ಟ್ರಸ್ಟ್ ಗೌರವಾಧ್ಯಕ್ಷರಾದ ಉದಯ ಭಟ್ ಕೊಳಬ್ಬೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಮುಗೇರಡ್ಕ ಮೂವರು ದೈವಗಳ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಗೌಡ ಅಂತರ, ಜೈ ಶ್ರೀರಾಮ ಟ್ರಸ್ಟ್ ಅಧ್ಯಕ್ಷ ಅಶೋಕ ಬರುಂಗುಡೇಲು ಹಾಗೂ ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ದೇಜಶ್ರೀ ಕೀಲಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ದೇಶಸೇವೆ ಸಲ್ಲಿಸಿ ನಿವೃತ್ತರಾದ ಯೋಧ ದೇವಪ್ರಸಾದ್ ಗೌಡ ಬರೆಮೇಲು ಅವರನ್ನು ಟ್ರಸ್ಟ್ ಹಾಗೂ ಶಿಶುಮಂದಿರದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳು:
ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡು, ಬಳಿಕ ಶ್ರೀ ಬಾಲಕೃಷ್ಣನ ತೊಟ್ಟಿಲು ಸೇವೆ ಜರುಗಿತು. ಸಣ್ಣ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಬಾಲಕೃಷ್ಣ, ಶ್ರೀಕೃಷ್ಣ ಹಾಗೂ ರಾಧಾ-ಕೃಷ್ಣ ವೇಷಭೂಷಣ ಸ್ಪರ್ಧೆಗಳು ಮತ್ತು ನೃತ್ಯ ಪ್ರದರ್ಶನಗಳು ನೆರೆದವರ ಮನಸೂರೆಗೊಂಡವು.
ಬಳಿಕ ಸಾರ್ವಜನಿಕರಿಗೆ, ಪೋಷಕರಿಗೆ ಹಾಗೂ ಮಕ್ಕಳಿಗೆ ಸಾಂಪ್ರದಾಯಿಕ ಮೊಸರು ಕುಡಿಕೆ ಮತ್ತು ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಆಗಮಿಸಿದ ಎಲ್ಲಾ ವಿದ್ಯಾಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ತಿಂಡಿ ಮತ್ತು ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ದಿವ್ಯಶ್ರೀ ಪದ್ಮುಂಜ ಪ್ರಾರ್ಥಿಸಿದರು. ಶ್ರೀಮತಿ ಪುಷ್ಪಲತಾ ಮಾತಾಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭರತೇಶ್ ಗೌಡ ಪುಣ್ಕೆದಡಿ ಕಾರ್ಯಕ್ರಮ ನಿರೂಪಿಸಿದರೆ, ಶ್ರೀಮತಿ ನವ್ಯಶ್ರೀ ವಂದಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿನ ಪದಾಧಿಕಾರಿಗಳು, ಸದಸ್ಯರು, ಪೋಷಕರು ಹಾಗೂ ಅಪಾರ ಸಂಖ್ಯೆಯ ವಿದ್ಯಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


