ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಪರಿಶೀಲನಾ ಸಭೆಯು ಕಮಿಷನ್ ಆರೋಪ, ಪ್ರತಿಪಕ್ಷಗಳ ತೀವ್ರ ತರಾಟೆ ಹಾಗೂ ಅಧಿಕಾರಿಗಳ ಗೈರುಹಾಜರಿಯ ಗದ್ದಲಕ್ಕೆ ವೇದಿಕೆಯಾಯಿತು.
ಕೆಆರ್‌ಐಡಿಎಲ್ ಶೇ.7 ಕಮಿಷನ್ ದಂಧೆ: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
ಕೆಆರ್‌ಐಡಿಎಲ್ ಕಾಮಗಾರಿಗಳ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರೇ ಬಿಲ್ ಪಾಸ್ ಮಾಡಲು ಶೇ. 7ರಷ್ಟು ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂದು ಸಿಎಂಗೆ ಪತ್ರ ಬರೆದಿರುವುದನ್ನು ಉಲ್ಲೇಖಿಸಿದ ಅವರು, ಇಲಾಖಾ ಮಟ್ಟದ ತನಿಖೆ ಕಣ್ಣೊರೆಸುವ ತಂತ್ರವಾಗಿದ್ದು, ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಪಟ್ಟು ಹಿಡಿದರು.
ಶಾಸಕ ಹರೀಶ್ ಪೂಂಜಾ ಮಾತನಾಡಿ, ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲೇ ಈ ಕುರಿತು ತನಿಖೆಗೆ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
'ಮಕ್ಕಳಾಟಿಕೆ' ಪದಪ್ರಯೋಗ: ಸಚಿವರ ವಿರುದ್ಧ ಶಾಸಕರ ಆಕ್ರೋಶ
ಪ್ರತಿಪಕ್ಷಗಳ ಗದ್ದಲದ ವೇಳೆ ಸಚಿವ ಯು.ಟಿ. ಖಾದರ್ "ಇದು ಮಕ್ಕಳಾಟಿಕೆ ಅಲ್ಲ, ಸಭೆ ನಿಯಮಾವಳಿ ಪ್ರಕಾರ ನಡೆಯಬೇಕು" ಎಂದಾಗ ಶಾಸಕರಾದ ಭರತ್ ಶೆಟ್ಟಿ ಮತ್ತು ಹರೀಶ್ ಪೂಂಜಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳ ಧ್ವನಿಯನ್ನು ಹತ್ತಿಕ್ಕಬಾರದು ಎಂದು ಸಚಿವರ ಜೊತೆ ತೀವ್ರ ವಾಗ್ವಾದ ನಡೆಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಸಚಿವ ಖಾದರ್, ಶಾಸಕರ ಪತ್ರದ ಆಧಾರದ ಮೇಲೆ ಈಗಾಗಲೇ ಸೂಪರಿಂಟೆಂಡೆಂಟ್ ಇಂಜಿನಿಯರ್ ಮಟ್ಟದ ಸಮಿತಿ ತನಿಖೆ ಆರಂಭಿಸಿದೆ. ಕಾನೂನು ಚೌಕಟ್ಟಿನಲ್ಲಿ ಅಗತ್ಯ ತನಿಖೆಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.
ಕಸ್ತೂರಿ ರಂಗನ್ ವರದಿ: ಕೇರಳ ಮಾದರಿ ಸಮೀಕ್ಷೆಗೆ ಆಗ್ರಹ
ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ಶಾಸಕ ಹರೀಶ್ ಪೂಂಜಾ ಕಸ್ತೂರಿ ರಂಗನ್ ವರದಿಯಿಂದ ಕರಾವಳಿಯ ರೈತರಿಗೆ ಉಂಟಾಗುವ ಆತಂಕದ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಬರಿ ತಿರಸ್ಕಾರ ಸಾಲದು, ಕೇರಳ ಮಾದರಿಯಲ್ಲಿ ಭೂಮಟ್ಟದ ಸಮೀಕ್ಷೆ (ಗ್ರೌಂಡ್ ಸರ್ವೆ) ನಡೆಸಿ, ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮಸಭೆ ಕರೆದು ಆಕ್ಷೇಪಣೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಖಾದರ್ ಮಾತನಾಡಿ, ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗೈರಾದ ಪೊಲೀಸ್ ಕಮಿಷನರ್‌ಗೆ ಸಚಿವರ ತರಾಟೆ
ಸಭೆಗೆ ಪೂರ್ವಾನುಮತಿ ಇಲ್ಲದೆ ಗೈರುಹಾಜರಾದ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ನಡೆಗೆ ಸಚಿವ ಯು.ಟಿ. ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಿಯಮಗಳು ಎಲ್ಲರಿಗೂ ಒಂದೇ, ಉನ್ನತ ಅಧಿಕಾರಿಗಳು ಸಭೆಗೆ ಬರದಿದ್ದರೆ ಕನಿಷ್ಠ ಒಂದು ದಿನ ಮುಂಚಿತವಾಗಿ ಜಿಲ್ಲಾಧಿಕಾರಿಗಳಿಗೆ ಲಿಖಿತ ಮಾಹಿತಿ ನೀಡಬೇಕು ಎಂದು ಎಚ್ಚರಿಸಿದರು.

