ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಗತವೈಭವವನ್ನು ಮರಳಿ ತರುವುದು ಮತ್ತು ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ 8 ಕ್ಷೇತ್ರಗಳಲ್ಲೂ ಪಕ್ಷವನ್ನು ವಿಜಯಿಗೊಳಿಸುವುದು ನನ್ನ ಪ್ರಮುಖ ಹೊಣೆಗಾರಿಕೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷ ಸಂಘಟನೆ ಮತ್ತು ಕರಾವಳಿ ಭಾಗದಲ್ಲಿ ಶಾಂತ್ಯಾತ್ಮಕ ವಾತಾವರಣ ನಿರ್ಮಾಣ ಮಾಡುವ ಕುರಿತು ತಮ್ಮ ಮುಂದಿನ ಕಾರ್ಯತಂತ್ರಗಳನ್ನು ಹಂಚಿಕೊಂಡರು.
ಕರಾವಳಿಯ ಸಾಮರಸ್ಯ ಹಾಗೂ ಅಭಿವೃದ್ಧಿಯ ಪುನರುಜ್ಜೀವನ
"ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಇಡೀ ಕರಾವಳಿ ಪ್ರದೇಶವು ಶಾಂತಿ ಹಾಗೂ ಸಾಮರಸ್ಯದ ತಾಣವಾಗಿತ್ತು. ಜಾತಿ, ಧರ್ಮಗಳ ಭೇದಭಾವವಿಲ್ಲದೆ ಜನರು ಒಗ್ಗಟ್ಟಿನಿಂದ ಬಾಳುತ್ತಿದ್ದರು ಮತ್ತು ಆ ಅವಧಿಯಲ್ಲಿ ಜಿಲ್ಲೆಯಲ್ಲಿ ಅಭೂತಪೂರ್ವ ಅಭಿವೃದ್ಧಿ ಕೆಲಸಗಳು ನಡೆದಿದ್ದವು. ಆದರೆ, ಇತ್ತೀಚಿನ ಚುನಾವಣೆಗಳಲ್ಲಿ ವಿರೋಧ ಪಕ್ಷಗಳು ಯಾವ ರೀತಿ ಗೆಲುವು ಸಾಧಿಸಿವೆ ಎಂಬುದನ್ನು ಜಿಲ್ಲೆಯ ಮತದಾರರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಕರಾವಳಿಯಲ್ಲಿ ಮತ್ತೆ ಆ ಹಳೆಯ ಸೌಹಾರ್ದತೆ ಮತ್ತು ಅಭಿವೃದ್ಧಿಯ ಯುಗವನ್ನು ಮರಳಿಸುವುದು ನಮ್ಮ ಆದ್ಯತೆಯಾಗಿದೆ" ಎಂದು ಅವರು ಹೇಳಿದರು.
ಬೂತ್ ಮಟ್ಟದಿಂದ ಪಕ್ಷ ಸಂಘಟನೆ
ಪಕ್ಷ ಸಂಘಟನೆಯ ಕುರಿತು ಮಾತನಾಡಿದ ಪದ್ಮರಾಜ್, "ನಾನು ಕೇವಲ ಕಚೇರಿಗೆ ಸೀಮಿತವಾಗದೆ ಜಿಲ್ಲೆಯ ಕಟ್ಟಕಡೆಯ ಬೂತ್ ಮಟ್ಟದವರೆಗೂ ಪ್ರವಾಸ ಮಾಡುತ್ತೇನೆ. ಪ್ರತಿಯೊಬ್ಬ ಕಾರ್ಯಕರ್ತರನ್ನು ಹಾಗೂ ಮತದಾರರನ್ನು ನೇರವಾಗಿ ಸಂಪರ್ಕಿಸಿ ಪಕ್ಷದ ತತ್ವಗಳನ್ನು ತಲುಪಿಸುವ ಕೆಲಸ ಮಾಡುತ್ತೇನೆ" ಎಂದರು.
ಅಸಮಾಧಾನ ಶಮನ, ಒಗ್ಗಟ್ಟಿನ ಮಂತ್ರ
ಪಕ್ಷದೊಳಗಿನ ಅಭಿಪ್ರಾಯ ಭೇದಗಳ ಬಗ್ಗೆ ಉಲ್ಲೇಖಿಸಿದ ಅವರು, "ವಿವಿಧ ಕಾರಣಗಳಿಂದಾಗಿ ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಆದರೆ, ಮುಖಂಡರು ಮತ್ತು ಕಾರ್ಯಕರ್ತರನ್ನು ಒಂದೇ ವೇದಿಕೆಗೆ ತಂದು, ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಜವಾಬ್ದಾರಿಯನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಚುನಾವಣೆಗಳ ಹಿನ್ನಡೆಗೆ ಸಂಬಂಧಿಸಿದಂತೆ ಆತ್ಮಾವಲೋಕನ ಮಾಡಿಕೊಂಡು, ಮುಂದಿನ ದಿನಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯಾದ್ಯಂತ ಕಾಂಗ್ರೆಸ್ ಅಧಿಕಾರಕ್ಕೆ ಬರಲು ನಿರಂತರ ಶ್ರಮಿಸುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ವ ಸಮುದಾಯಗಳ ಬೆಂಬಲ ಗಳಿಸುವ ವಿಶ್ವಾಸ
"ನಾನು ಕೇವಲ ಬಿಲ್ಲವ ಸಮುದಾಯಕ್ಕೆ ಸೀಮಿತವಾದ ನಾಯಕನಲ್ಲ. ಜಿಲ್ಲೆಯ ಸರ್ವ ಸಮುದಾಯಗಳ ಪ್ರೀತಿ ಮತ್ತು ಒಲವನ್ನು ಗಳಿಸುವುದು ನನ್ನ ಆಶಯ. ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದೊಂದೇ ನನ್ನ ಏಕೈಕ ಧೇಯ್ಯ" ಎಂದು ನೂತನ ಅಧ್ಯಕ್ಷರು ಪ್ರತಿಪಾದಿಸಿದರು.