ನ್ಯೂಸ್ 2 ಡೇ ಕನ್ನಡ ಡಿಜಿಟಲ್ ಡೆಸ್ಕ್:ಮಂಗಳೂರು
ದಕ್ಷಿಣ ಕನ್ನಡ ಜಿಲ್ಲಾ ರಾಜಕಾರಣದಲ್ಲಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ನಡೆ ಮತ್ತೆ ಸಂಚಲನ ಮೂಡಿಸಿದೆ. ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ನೂತನ ಜಿಲ್ಲಾ ಕಾಂಗ್ರೆಸ್ ಕಚೇರಿ (DCC) ನಿರ್ಮಾಣಗೊಂಡು 9 ವರ್ಷಗಳು ಕಳೆದಿದ್ದರೂ (2017) ಇಲ್ಲಿಯವರೆಗೆ ಒಮ್ಮೆಯೂ ಕಾಲಿಡದ ಪೂಜಾರಿಯವರು, ಗುರುವಾರ ಹೊಸ ಇತಿಹಾಸ ಬರೆದಿದ್ದಾರೆ. ತಮ್ಮ ಪಟ್ಟಶಿಷ್ಯ ಪದ್ಮರಾಜ್ ಆರ್. ಪೂಜಾರಿ ಅವರು ನೂತನ ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಕಾರ್ಯಕ್ರಮಕ್ಕೆ ಆಗಮಿಸಿ, ಆಶೀರ್ವದಿಸುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದ್ದಾರೆ.
88ರ ಇಳಿವಯಸ್ಸಿನಲ್ಲೂ ಕಚೇರಿಗೆ ಭೇಟಿ: ನಾಯಕರಲ್ಲಿ ಸಂಚಲನ
ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಗಟ್ಟಿನೆಲೆಯಾಗಿದ್ದ ಕರಾವಳಿಯಲ್ಲಿ ಕಾಲಕ್ರಮೇಣ ಬಿಜೆಪಿ ತನ್ನ ಆಧಿಪತ್ಯ ಸಾಧಿಸಿತು. ಈ ರಾಜಕೀಯ ಬದಲಾವಣೆಯ ನಡುವೆ ಸ್ವತಃ ಜನಾರ್ದನ ಪೂಜಾರಿಯವರು ಸರಣಿ ಸೋಲು ಕಂಡಿದ್ದರು. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಹಾಗೂ ಸ್ಥಳೀಯ ನಾಯಕರ ನಿರ್ಧಾರಗಳ ವಿರುದ್ಧ ಪೂಜಾರಿ ಅವರು ಕಟುವಾಗಿ ನೀಡುತ್ತಿದ್ದ ಹೇಳಿಕೆಗಳು ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದ್ದವು.
2013ರ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಬಹುತೇಕ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತಾದರೂ, ತದನಂತರದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸುತ್ತಲೇ ಬಂದಿತ್ತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಮಂಗಳೂರಿನ ಮಲ್ಲಿಕಟ್ಟೆಯಲ್ಲಿ 3 ಮಹಡಿಗಳ ಸುಸಜ್ಜಿತ ನೂತನ ಕಚೇರಿ ಉದ್ಘಾಟನೆಗೊಂಡಾಗಲೂ ಪೂಜಾರಿ ಅವರು ಗೈರಾಗಿದ್ದರು. ಅವರ ಅನಾರೋಗ್ಯವೇ ಇದಕ್ಕೆ ಕಾರಣ ಎಂದು ಭಾವಿಸಲಾಗಿತ್ತು. ಆದರೆ, 88ರ ಇಳಿವಯಸ್ಸಿನಲ್ಲೂ ತಮ್ಮ ಪ್ರೀತಿಯ ಶಿಷ್ಯನ ಆಹ್ವಾನ ಮೇರೆಗೆ ಕಚೇರಿಗೆ ಬಂದಿರುವುದು ಜಿಲ್ಲಾ ಕಾಂಗ್ರೆಸ್‌ಗೆ ಹೊಸ ಚೈತನ್ಯ ನೀಡಿದೆ.
ಜೆ.ಆರ್. ಲೋಬೊ ಅವರ ಪ್ರತಿಕ್ರಿಯೆ:
ಜನಾರ್ದನ ಪೂಜಾರಿ ಅವರ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಮಾಜಿ ಶಾಸಕ ಜೆ.ಆರ್. ಲೋಬೊ, "ಜನಾರ್ದನ ಪೂಜಾರಿಯವರು ಇಷ್ಟು ವರ್ಷ ಪಕ್ಷದ ಚಟುವಟಿಕೆಗಳಿಂದ ದೂರ ಉಳಿಯಲು ವಯೋಸಹಜ ಆರೋಗ್ಯ ಸಮಸ್ಯೆಗಳೇ ಮುಖ್ಯ ಕಾರಣ. ಆದರೆ ಇಂದು ಅವರ ಪ್ರೀತಿಯ ಶಿಷ್ಯ ಪದ್ಮರಾಜ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವುದರಿಂದ, ಶಿಷ್ಯನ ಮೇಲಿನ ವಿಶೇಷ ಅಭಿಮಾನ ಹಾಗೂ ಗೌರವದಿಂದ ಕಚೇರಿಗೆ ಆಗಮಿಸಿದ್ದಾರೆ. ಯಾವುದೇ ರಾಜಕೀಯ ಉದ್ದೇಶಗಳಿಗಿಂತ ಹೆಚ್ಚಾಗಿ ತಮ್ಮ ಶಿಷ್ಯನನ್ನು ಆಶೀರ್ವದಿಸಲು ಬಂದಿರುವ ಅವರ ಉಪಸ್ಥಿತಿ ಸ್ಥಳೀಯ ಕಾರ್ಯಕರ್ತರಲ್ಲಿ ಬಲ ತಂದಿದೆ" ಎಂದರು.
ತಳಮಟ್ಟದಿಂದ ಪಕ್ಷ ಸಂಘಟನೆ: ಪದ್ಮರಾಜ್ ಆರ್. ಪೂಜಾರಿ ಶಪಥ
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, "ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುವ ತಳಮಟ್ಟದ ಕಟ್ಟಕಡೆಯ ಕಾರ್ಯಕರ್ತನಿಗೆ ಸೂಕ್ತ ಗೌರವ ನೀಡುವುದು ನನ್ನ ಮೊದಲ ಆದ್ಯತೆ. ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸಿ, ಹಿರಿಯ ನಾಯಕರ ಮಾರ್ಗದರ್ಶನ ಹಾಗೂ ಕಾರ್ಯಕರ್ತರ ಬೆಂಬಲದೊಂದಿಗೆ ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಹಳೆಯ ಗತವೈಭವವನ್ನು ಮರಳಿ ತರಲು ಶ್ರಮಿಸುತ್ತೇನೆ" ಎಂದು ಭರವಸೆ ನೀಡಿದರು.
ಈ ವಿಶೇಷ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್ ಸೇರಿದಂತೆ ಹಲವು ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

