
ಬಂಟ್ವಾಳ: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಬಂಟ್ವಾಳದ ನಿವಾಸಕ್ಕೆ ಶುಕ್ರವಾರ ರಾತ್ರಿ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.
ತಮ್ಮ ಸಾಲು ಸಾಲು ಅಧಿಕೃತ ಕಾರ್ಯಕ್ರಮಗಳ ನಡುವೆಯೂ ಬಿಡುವು ಮಾಡಿಕೊಂಡು ಆಗಮಿಸಿದ್ದ ಮುಖ್ಯಮಂತ್ರಿಗಳು, ಸುಮಾರು 10 ನಿಮಿಷಗಳ ಕಾಲ ಪೂಜಾರಿ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಹಿರಿಯ ನಾಯಕನ ಆರೋಗ್ಯ ವಿಚಾರಿಸಿದ ಅವರು, ವಿವಿಧ ಕ್ಷೇಮಸಮಾಚಾರಗಳನ್ನು ಹಂಚಿಕೊಂಡರು.
ಹಳೆಯ ನೆನಪು ಮೆಲುಕು:
ಕಳೆದ ಫೆಬ್ರವರಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಪೂಜಾರಿ ಅವರ ಮನೆಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಜನಾರ್ದನ ಪೂಜಾರಿಯವರು, "ಉತ್ತಮವಾಗಿ ಕೆಲಸ ಮಾಡಿ ನಾಡಿಗೆ ಕೀರ್ತಿ ತನ್ನಿ, ಮುಂದಿನ ದಿನಗಳಲ್ಲಿ ನೀವು ಮುಖ್ಯಮಂತ್ರಿಯಾಗಿ ಬರುವಂತಾಗಲಿ" ಎಂದು ಹಾರೈಸಿದ್ದರು. ಇದೀಗ ತಾವು ಮುಖ್ಯಮಂತ್ರಿಯಾದ ಬಳಿಕ ಪೂಜಾರಿಯವರನ್ನು ಭೇಟಿ ಮಾಡುವ ಮೂಲಕ, ಅಂದು ಅವರು ನುಡಿದಿದ್ದ ಶುಭನುಡಿ ನಿಜವಾದ ನೆನಪನ್ನು ಮೆಲುಕು ಹಾಕಿದರು.
ಈ ಆತ್ಮೀಯ ಭೇಟಿಯ ಸಂದರ್ಭದಲ್ಲಿ ಬಿ. ಜನಾರ್ದನ ಪೂಜಾರಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶಾಲು ಹೊದಿಸಿ ಗೌರವಿಸಿದರು. ತರುವಾಯ ಪೂಜಾರಿ ಅವರ ಪತ್ನಿ ಹಾಗೂ ಕುಟುಂಬಸ್ಥರೊಂದಿಗೆ ಮುಖ್ಯಮಂತ್ರಿಗಳು ಫೋಟೋಗೆ ಜೊತೆಯಾದರು.
ಈ ಸಂದರ್ಭದಲ್ಲಿ ಸಚಿವ ಯು.ಟಿ. ಖಾದರ್, ಮಾಜಿ ಸಚಿವ ಬಿ. ರಮಾನಾಥ ರೈ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪದ್ಮರಾಜ್, ಹಾಗೂ ಪಕ್ಷದ ಪ್ರಮುಖ ನಾಯಕರಾದ ಮಿಥುನ್ ರೈ, ಇನಾಯತ್ ಅಲಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.