ಕಣಿಯೂರು: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು.
ಸಂಸ್ಥೆಯ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಪ್ರೇಮನಾಥ ಶೆಟ್ಟಿ ಮಲೆಂಗಲ್ಲು ಅವರು ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿಕೊಟ್ಟರೆ, ಪದ್ಮುಂಜ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಯ ವತಿಯಿಂದ ಮಧ್ಯಾಹ್ನ ಸುಗ್ರಾಸ ಭೋಜನದ ಅನ್ನಸಂತರ್ಪಣೆ ನಡೆಯಿತು.
ಇದರೊಂದಿಗೆ, ಪ್ರಮುಖರಾದ ರಂಜಿತ್ ಪದ್ಮುಂಜ ಹಾಗೂ ಮಹೇಶ್ ಪದ್ಮುಂಜ ಅವರು ಕೇಂದ್ರದ ಮಕ್ಕಳಿಗೆ ಸಿಹಿ ತಿಂಡಿ ಮತ್ತು ತಂಪಾದ ಪಾನೀಯಗಳನ್ನು ವಿತರಿಸಿ ಸಂತಸ ಹಂಚಿಕೊಂಡರು. ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಸುನಿತಾ ಅವರು ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶಯುಕ್ತ ಮೊಟ್ಟೆಗಳನ್ನು ಕೊಡುಗೆಯಾಗಿ ನೀಡಿದರು.
ಈ ಸತ್ಕಾರ್ಯದ ಸಂದರ್ಭದಲ್ಲಿ ಉದಾರ ಮನಸ್ಸಿನ ದಾನಿಗಳು, ಪುನರ್ವಸತಿ ಕೇಂದ್ರದ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
