ದಕ್ಷಿಣ ಕನ್ನಡ

Belthangady :ತುಳು ಭಾಷೆಗೆ ಎರಡನೇ ಅಧಿಕೃತ ಆಡಳಿತ ಭಾಷೆ ಗೌರವ: ರಾಜ್ಯ ಸರ್ಕಾರಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆ ಧನ್ಯವಾದ


ಬೆಳ್ತಂಗಡಿ: ಕರ್ನಾಟಕ ಸರ್ಕಾರವು ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡುವ ಮೂಲಕ ಭಾಷಾ ಪ್ರೇಮಿಗಳಿಗೆ ಮತ್ತು ತುಳುನಾಡಿನ ಜನತೆಗೆ ಹೆಮ್ಮೆಯ ಕ್ಷಣ ತಂದಿತ್ತಿದೆ. ಸರ್ಕಾರದ ಈ ಐತಿಹಾಸಿಕ ತೀರ್ಮಾನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮುಕ್ತ ಕಂಠದಿಂದ ಶುಭ ಹಾರೈಸಿ, ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

​ಸರ್ಕಾರದ ನಿರ್ಧಾರಕ್ಕೆ ಹರ್ಷ:

​ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಎರಡನೇ ಅಧಿಕೃತ ಆಡಳಿತ ಭಾಷೆಯ ಮಾನ್ಯತೆ ನೀಡುವ ಮಹತ್ವದ ನಿರ್ಧಾರ ತಳೆಯಲಾಗಿತ್ತು. ಈ ಕುರಿತು ಪ್ರಕಟಣೆ ಹೊರಡಿಸಿರುವ ಡಾ. ಹೆಗ್ಗಡೆಯವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ದೇಶ-ವಿದೇಶಗಳಲ್ಲಿ ನೆಲೆಸಿರುವ ಕೋಟ್ಯಂತರ ತುಳುವರ ಪರವಾಗಿ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

​ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆಗೆ ಹೊಸ ಬಲ:

​"ತುಳು ಭಾಷೆಗೆ ರಾಜ್ಯ ಮಟ್ಟದಲ್ಲಿ ಸಿಕ್ಕಿರುವ ಈ ಅಧಿಕೃತ ಸ್ಥಾನಮಾನವು, ಮುಂಬರುವ ದಿನಗಳಲ್ಲಿ ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸುವ ಸುದೀರ್ಘ ಹೋರಾಟ ಹಾಗೂ ಪ್ರಕ್ರಿಯೆಗೆ ಹೊಸ ಆನೆಬಲ ನೀಡಲಿದೆ" ಎಂದು ಡಾ. ವೀರೇಂದ್ರ ಹೆಗ್ಗಡೆಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

​2009ರ ವಿಶ್ವ ತುಳು ಸಮ್ಮೇಳನದ ನೆನಪು:

​ಈ ಸಂದರ್ಭದಲ್ಲಿ 2009ರಲ್ಲಿ ಉಜಿರೆಯಲ್ಲಿ ವೈಭವದಿಂದ ಆಯೋಜಿಸಲಾಗಿದ್ದ ವಿಶ್ವ ತುಳು ಸಮ್ಮೇಳನವನ್ನು ಸ್ಮರಿಸಿದ ಅವರು, "ಆ ಸಮ್ಮೇಳನವು ತುಳು ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸಲು ಮಹತ್ವದ ವೇದಿಕೆಯಾಗಿತ್ತು. ವಿಶೇ‍ಷವಾಗಿ ಅಲ್ಲಿ ನಿರ್ಮಿಸಲಾಗಿದ್ದ 'ತುಳುಗ್ರಾಮ'ದ ಕಲ್ಪನೆಯು ನಾಡಿನಾದ್ಯಂತ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು" ಎಂದರು.

​ತುಳುನಾಡಿನ ಜನರ ಬಹುಕಾಲದ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಭಾಷೆಯ ಗೌರವ ಹೆಚ್ಚಿಸಿದ ರಾಜ್ಯ ಸರ್ಕಾರಕ್ಕೆ ಧರ್ಮಸ್ಥಳ ಕ್ಷೇತ್ರ ಹಾಗೂ ಸಮಸ್ತ ತುಳು ಅಭಿಮಾನಿಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



image