ದಕ್ಷಿಣ ಕನ್ನಡ

Belthangady : ಕಸ್ತೂರಿರಂಗನ್ ವರದಿ: ಗ್ರಾಮಸಭೆಗಳಲ್ಲಿ ಆಕ್ಷೇಪಣೆ ಸಲ್ಲಿಕೆಗೆ ಶಾಸಕ ಹರೀಶ್ ಪೂಂಜ ಕರೆ; ಆಡಳಿತದಿಂದ ತಕ್ಷಣದ ಕ್ರಮ



ಬೆಳ್ತಂಗಡಿ: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ (ESA) ಕುರಿತ ಕಸ್ತೂರಿರಂಗನ್ ವರದಿಯ ಕರಡು ಪ್ರತಿಯ ಬಗ್ಗೆ ಸ್ಥಳೀಯ ಗ್ರಾಮಸ್ಥರ ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ದಾಖಲಿಸಲು ವಿಶೇಷ ಗ್ರಾಮಸಭೆಗಳನ್ನು ನಡೆಸುವಂತೆ ಶಾಸಕ ಹರೀಶ್ ಪೂಂಜ ನೀಡಿದ್ದ ಸಲಹೆಗೆ ಜಿಲ್ಲಾಡಳಿತ ತಕ್ಷಣ ಸ್ಪಂದಿಸಿದೆ.

​ಸೆಪ್ಟೆಂಬರ್ 15ರಂದು ನಡೆದ ಜಿಲ್ಲಾ ಕೆಡಿಪಿ ಸಭೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದು, ಕಸ್ತೂರಿರಂಗನ್ ವರದಿಯ ಕುರಿತು ಗ್ರಾಮ ಮಟ್ಟದಲ್ಲೇ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸ್ಪಷ್ಟ ನಿಲುವು ದಾಖಲಾಗಬೇಕು ಎಂದು ಒತ್ತಾಯಿಸಿದ್ದರು. ಶಾಸಕರ ಈ ಪ್ರಸ್ತಾವನೆಗೆ ಸಚಿವರು ಕೂಡಲೇ ಸಮ್ಮತಿಸಿ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದ್ದರು.

​ಅದರಂತೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (CEO) ಅವರು ತಾಲೂಕು ಪಂಚಾಯಿತಿಗಳ ಮೂಲಕ ಪಶ್ಚಿಮ ಘಟ್ಟ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ತಕ್ಷಣದ ಸೂಚನೆ ಹೊರಡಿಸಿದ್ದಾರೆ. ವಿಶೇಷ ಗ್ರಾಮಸಭೆಗಳ ವಿವರಗಳನ್ನು 'ಪಂಚತಂತ್ರ 2.0' ತಂತ್ರಾಂಶದಲ್ಲಿ ನಮೂದಿಸುವುದು ಹಾಗೂ ಸಭೆಯಲ್ಲಿ ವ್ಯಕ್ತವಾಗುವ ರೈತರ, ಸಾರ್ವಜನಿಕರ ಆಕ್ಷೇಪಣೆ ಮತ್ತು ಸಲಹೆಗಳನ್ನು ಅಧಿಕೃತ ನಡಾವಳಿ ಪುಸ್ತಕದಲ್ಲಿ (Minutes) ಕಡ್ಡಾಯವಾಗಿ ದಾಖಲಿಸುವಂತೆ ಆಡಳಿತಾತ್ಮಕ ಆದೇಶ ನೀಡಲಾಗಿದೆ.

​ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಹರೀಶ್ ಪೂಂಜ, "ಪಶ್ಚಿಮ ಘಟ್ಟ ಪ್ರದೇಶದ ರೈತರು ಹಾಗೂ ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ವಾಸ್ತವಿಕ ಸಮಸ್ಯೆಗಳನ್ನು ಸರ್ಕಾರದ ಹಂತಕ್ಕೆ ಅಧಿಕೃತವಾಗಿ ತಲುಪಿಸಲು ಇದೊಂದು ಮಹತ್ವದ ಅವಕಾಶ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಹಾಗೂ ರೈತರು ವಿಶೇಷ ಗ್ರಾಮಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಸಮ್ಮತಿ ಅಥವಾ ಆಕ್ಷೇಪಣೆಗಳನ್ನು ನಡಾವಳಿಯಲ್ಲಿ ದಾಖಲಿಸಬೇಕು" ಎಂದು ಮನವಿ ಮಾಡಿದ್ದಾರೆ.



image