ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ದಡಂತಮಲೆ ದೊಂಪದಪಲ್ಕೆ ಎಂಬಲ್ಲಿ ಕಾನೂನುಬಾಹಿರವಾಗಿ ಹಣವನ್ನು ಪಣಕ್ಕಿಟ್ಟು ನಡೆಸಲಾಗುತ್ತಿದ್ದ ಕೋಳಿ ಅಂಕ ಜೂಜಾಟದ ಅಡ್ಡೆಗೆ ಧರ್ಮಸ್ಥಳ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಸೆಪ್ಟೆಂಬರ್ 13ರಂದು ಮಧ್ಯಾಹ್ನ ಸುಮಾರು 12:30ರ ವೇಳೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಧರ್ಮಸ್ಥಳ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ (PSI) ಸಮರ್ಥ್ ಆರ್. ಗಾಣಿಗೇರ ಅವರ ನೇತೃತ್ವದ ಪೊಲೀಸ್ ಸಿಬ್ಬಂದಿ ತಂಡವು ಈ ದಾಳಿ ಸಂಘಟಿಸಿತ್ತು. ಸ್ಥಳದಲ್ಲಿ ಕೋಳಿಗಳ ಕಾಲಿಗೆ ಚಾಕು/ಸಣ್ಣ ಕತ್ತಿಗಳನ್ನು ಕಟ್ಟಿ ಪರಸ್ಪರ ಕಾದಾಟಕ್ಕೆ ಬಿಟ್ಟು ಭಾರಿ ಮೊತ್ತದ ಹಣದ ಜೂಜಾಟ ನಡೆಸಲಾಗುತ್ತಿತ್ತು.
ಪೋಲಿಸ್ ಕಾರ್ಯಾಚರಣೆ ಹಾಗೂ ಬಂಧಿತರು:
ಪೊಲೀಸರ ಆಗಮನವನ್ನು ಗಮನಿಸಿದ ಹಲವು ಜೂಜುಕೋರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಪೈಕಿ ಬೆಳಾಲು ನಿವಾಸಿ ಯಶೋಧರ ಎಂಬಾತ ಕೋಳಿಗಳ ಕಾಲಿಗೆ ಕಟ್ಟಿದ್ದ ಕತ್ತಿಗಳನ್ನು ಬಿಚ್ಚಿಕೊಂಡು ಓಡಿಹೋಗಿದ್ದಾನೆ ಎಂದು ತಿಳಿದುಬಂದಿದೆ.
ದಾಳಿ ವೇಳೆ ಸಿಕ್ಕಿಬಿದ್ದ ಕೊಯ್ಯರು ಗ್ರಾಮದ ಬೀಜದಡಿ ನಿವಾಸಿ ಬಾಬಿ ಗೌಡ (64), ಬೆಳಾಲು ಗ್ರಾಮದ ಮಾಯ ದರ್ಖಾಸು ನಿವಾಸಿ ರಮೇಶ ಭಂಡಾರಿ (36) ಹಾಗೂ ಕೊಯ್ಯರು ಗ್ರಾಮದ ಅಕೋಟದಡಿ ನಿವಾಸಿ ಕೃಷ್ಣಪ್ಪ (35) ಎಂಬ ಮೂವರನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದಿದ್ದಾರೆ.
ಸೊತ್ತುಗಳ ಜಪ್ತಿ ಮತ್ತು ಪ್ರಕರಣ ದಾಖಲು:
ಸ್ಥಳದಿಂದ ಜೂಜಾಟಕ್ಕೆ ಬಳಸಿದ್ದ ₹21,250 ನಗದು ಹಣ ಹಾಗೂ 3 ಕೋಳಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಒಟ್ಟು ಸೊತ್ತಿನ ಮೌಲ್ಯ ಸುಮಾರು ₹22,050 ಎಂದು ಅಂದಾಜಿಸಲಾಗಿದೆ.
ಪ್ರಾಣಿ ಹಿಂಸೆ ತಡೆ ಕಾಯ್ದೆ ಹಾಗೂ ಜೂಜಾಟ ವಿರೋಧಿ ಕಾಯ್ದೆಯಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಖಲಾದ ಪ್ರಕರಣದ ವಿವರ: ಬಿಎನ್‌ಎಸ್ (BNS) ಕಲಂ 112, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 87 ಹಾಗೂ ಪ್ರಾಣಿಗಳ ಮೇಲಿನ ಕ್ರೂರತೆ ತಡೆ ಕಾಯ್ದೆ 1960ರ (Prevention of Cruelty to Animals Act) ಕಲಂ 11(1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ.
