ಬೆಳ್ತಂಗಡಿ: ತಾಲೂಕಿನ ಸವಣಾಲು ಗ್ರಾಮದ ಹನ್ಯಾಡಿ ಪಲ್ಕೆ ಎಂಬಲ್ಲಿ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ಇಲ್ಲಿನ ನಿವಾಸಿ ಬಾಲಕೃಷ್ಣ ನಾಯ್ಕ್ ಎಂಬುವವರ ಮನೆಯ ಅಂಗಳದಲ್ಲಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಇರಿಸಿದ್ದ ಬೋನಿನಲ್ಲಿ ಮಂಗಳವಾರ (ಸೆಪ್ಟೆಂಬರ್ 1) ಈ ಚಿರತೆ ಸೆರೆಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿರುವ ಅರಣ್ಯ ಇಲಾಖೆಯ ಸಿಬ್ಬಂದಿ, ಚಿರತೆಯನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. "ಸೆರೆಯಾಗಿರುವ ಚಿರತೆಯನ್ನು ಶೀಘ್ರದಲ್ಲೇ ಸೂಕ್ತ ಹಾಗೂ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಗುವುದು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರಲ್ಲಿ ನಿಟ್ಟುಸಿರು:
ಸವಣಾಲು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ಕೆಲವು ಸಮಯದಿಂದ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಈ ಹಿಂದೆ ಇದೇ ಗ್ರಾಮದ ಗುರಿಕಂಡ ಆನಂದ ಶೆಟ್ಟಿ ಎಂಬುವವರ ಮನೆಯ ಬಳಿ ಇಡಲಾಗಿದ್ದ ಬೋನಿಗೆ ಎರಡು ಚಿರತೆಗಳು ಸೆರೆಯಾಗಿದ್ದವು. ಇದೀಗ ಮತ್ತೊಂದು ಚಿರತೆ ಸೆರೆಯಾಗಿರುವುದರಿಂದ ಸವಣಾಲು ಗ್ರಾಮಸ್ಥರು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.
