ಆನೆಗುಡ್ಡೆ (ಉಡುಪಿ): ಶ್ರೀ ಕ್ಷೇತ್ರ ಆನೆಗುಡ್ಡೆ ವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕು ಭಜನಾ ಪರಿಷತ್‌ನ 28ನೇ ವರ್ಷದ ಭಜನಾ ಕಮ್ಮಟ ಹಾಗೂ ತಾಲೂಕು ಮಟ್ಟದ ಭಜನೋತ್ಸವದ ಪೂರ್ವಭಾವಿ ಸಭೆ ಮಂಗಳವಾರ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯ ಸಂಚಾಲಕ ಜಿ. ಸುಬ್ರಹ್ಮಣ್ಯ ಪ್ರಸಾದ್, "ಇಂದಿನ ಯುವಪೀಳಿಗೆಯಲ್ಲಿ ಸಂಸ್ಕಾರ ಮತ್ತು ಧಾರ್ಮಿಕ ಜಾಗೃತಿ ಮೂಡಿಸಲು ಭಜನೆ ಅತ್ಯಂತ ಪರಿಣಾಮಕಾರಿ ಮಾಧ್ಯಮ. ಯುವಜನರ ಮನಸ್ಸನ್ನು ಸನ್ಮಾರ್ಗದಲ್ಲಿ ನಡೆಸುವ ಶಕ್ತಿ ಭಜನೆಗೆ ಮಾತ್ರ ಇದೆ. ಭಜನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಹಾಗೂ ಏಕಾಗ್ರತೆ ದೊರೆಯುತ್ತದೆ," ಎಂದು ತಿಳಿಸಿದರು. ಅಲ್ಲದೆ, ಮುಂಬರುವ 5 ದಿನಗಳ ತರಬೇತಿ ಶಿಬಿರದಲ್ಲಿ ಶಿಬಿರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಹಾಗೂ ಸಭೆಯ ಗೌರವಾಧ್ಯಕ್ಷ ರಮಣ ಉಪಾಧ್ಯ ಮಾತನಾಡಿ, 5 ದಿನಗಳ ಕಾಲ ನಡೆಯಲಿರುವ ಈ ಭಜನಾ ತರಬೇತಿ ಶಿಬಿರ ಹಾಗೂ ತಾಲೂಕು ಮಟ್ಟದ ಭಜನೋತ್ಸವಕ್ಕೆ ದೇವಸ್ಥಾನದ ಕಡೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, 5 ದಿನಗಳ ತರಬೇತಿ ಶಿಬಿರದ ರೂಪುರೇಷೆಗಳು ಹಾಗೂ ಕಾರ್ಯಕ್ರಮದ ಕುರಿತು ಸವಿಸ್ತಾರ ಮಾಹಿತಿ ಹಂಚಿಕೊಂಡರು. ಇದೇ ಸಂದರ್ಭದಲ್ಲಿ 28ನೇ ವರ್ಷದ ಭಜನಾ ಕಮ್ಮಟಕ್ಕೆ ಆಯ್ಕೆಯಾದ ಶಿಬಿರಾರ್ಥಿಗಳಿಗೆ ಸ್ವರ ಪರೀಕ್ಷೆ (Voice Test) ನಡೆಸಲಾಯಿತು.
ಪ್ರಮುಖರ ಉಪಸ್ಥಿತಿ:
ಸಭೆಯಲ್ಲಿ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀ ರಾಮಕಿಶನ್ ಹೆಗ್ಡೆ, ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ, ಭಜನಾ ಪರಿಷತ್ತಿನ ಗೌರವ ಸಲಹೆಗಾರ್ತಿ ಅನುಪಮ ಎಸ್. ಶೆಟ್ಟಿ, ಯೋಜನೆ ಹಾಗೂ ತಾಲೂಕು ಪರಿಷತ್ತಿನ ಪ್ರಮುಖರಾದ ಸುಧೀರ್, ಉಮೇಶ್ ಶೆಟ್ಟಿ, ರಮೇಶ್ ಪಿ.ಕೆ., ಹರೀಶ್ ಶಾನಭೋಗ್, ಬ್ರಹ್ಮಾವರ ತಾಲೂಕು ಪರಿಷತ್ ಅಧ್ಯಕ್ಷ ಪ್ರಸನ್ನ ಕುಮಾರ್, ಕಾರ್ಯದರ್ಶಿ ಸುರೇಂದ್ರ ಶೆಟ್ಟಿ ಮತ್ತು ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ರವೀಂದ್ರ ಎಸ್. ಉಪಸ್ಥಿತರಿದ್ದರು.
ಉಭಯ ತಾಲೂಕುಗಳ ವಲಯ ಸಂಯೋಜಕರು, ವಿವಿಧ ಭಜನಾ ಮಂಡಳಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಯೋಜನಾ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ನಿವೃತ್ತ ವಿಸ್ತರಣಾಧಿಕಾರಿ ನರಸಿಂಹ ಪೂಜಾರಿ ಕಾರ್ಯಕ್ರಮ ನಿರೂಪಿಸಿದರೆ, ಯೋಜನಾಧಿಕಾರಿ ಉಮೇಶ್ ಶೆಟ್ಟಿ ಧನ್ಯವಾದ ಸಲ್ಲಿಸಿದರು.

