ದಕ್ಷಿಣ ಕನ್ನಡ

ಬೆಳ್ತಂಗಡಿ: ಬೆಳಾಲಿನಲ್ಲಿ ರಸ್ತೆ ಮಧ್ಯೆ ಕಾಡಾನೆ ಪ್ರತ್ಯಕ್ಷ; ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರು, ಸಾರ್ವಜನಿಕರಲ್ಲಿ ಆತಂಕ



ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದಲ್ಲಿ ರಾತ್ರಿ ವೇಳೆ ಬೈಕ್ ಸವಾರನಿಗೆ ಹಠಾತ್ತಾಗಿ ಕಾಡಾನೆಯೊಂದು ಎದುರಾಗಿ, ಆತ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಸೆಪ್ಟೆಂಬರ್ 3ರಂದು ನಡೆದಿದೆ.

​ಉಜಿರೆ–ಬೆಳಾಲು–ಬಂದಾರು ಸಂಪರ್ಕಿಸುವ ಮುಖ್ಯ ರಸ್ತೆಯ ಮಿನಂದೇಲು ಬಸ್ ತಂಗುದಾಣ ಹಾಗೂ ಡಿ.ಪಿ. ಸ್ಪೋರ್ಟ್ಸ್ ಕ್ಲಬ್ ಮೈದಾನದ ಸಮೀಪ ರಾತ್ರಿ ಸುಮಾರು 10:00ಯಿಂದ 10:30ರ ಅವಧಿಯಲ್ಲಿ ಈ ಆತಂಕಕಾರಿ ಸನ್ನಿವೇಶ ಎದುರಾಗಿದೆ. ಯುವಕನೊಬ್ಬ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮಾರ್ಗಮಧ್ಯದಲ್ಲೇ ಬೃಹತ್ ಆನೆ ಪ್ರತ್ಯಕ್ಷವಾಗಿದೆ. ತಕ್ಷಣವೇ ಬೈಕ್ ಚಾಲಕ ಚಾಕಚಕ್ಯತೆಯಿಂದ ಕಾರ್ಯನಿರ್ವಹಿಸಿ, ಯಾವುದೇ ರೀತಿಯ ಅಪಾಯವಿಲ್ಲದೆ ಸುರಕ್ಷಿತವಾಗಿ ಅಲ್ಲಿಂದ ತೆರಳಿದ್ದಾನೆ.

​ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆ ಇಂದಿಗೂ ಅದೇ ಅರಣ್ಯ ಅಂಚಿನ ಪ್ರದೇಶದಲ್ಲಿ ಬೀಡುಬಿಟ್ಟಿರುವ ಸಾಧ್ಯತೆಯಿರುವುದರಿಂದ, ರಾತ್ರಿ ವೇಳೆ ಉಜಿರೆ–ಬೆಳಾಲು–ಬಂದಾರು ಮಾರ್ಗವಾಗಿ ಪ್ರಯಾಣಿಸುವ ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ಎಚ್ಚರ ವಹಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

​ಪ್ರದೇಶದಲ್ಲಿ ಆನೆಗಳ ಹಾವಳಿ ಮತ್ತು ಸಂಚಾರ ಹೆಚ್ಚುತ್ತಿರುವುದರಿಂದ ಅರಣ್ಯ ಇಲಾಖೆಯು ಇತ್ತಂಡಗಳಲ್ಲಿ ಗಸ್ತು ತಿರುಗಾಟ ಚುರುಕುಗೊಳಿಸಬೇಕು ಹಾಗೂ ಗ್ರಾಮಸ್ಥರಿಗೆ ಸೂಕ್ತ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



image