ಬೆಂಗಳೂರು: ರಾಜ್ಯ ಲೋಕೋಪಯೋಗಿ (PWD) ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಬೆಳ್ಳಂಬೆಳಗ್ಗೆ ಭಾರಿ ಆಘಾತ ನೀಡಿದ್ದಾರೆ. ಸಚಿವರ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸ ಸೇರಿದಂತೆ ಅವರೊಂದಿಗೆ ನಂಟು ಹೊಂದಿರುವ ಹಲವು ಆಯಕಟ್ಟಿನ ಸ್ಥಳಗಳ ಮೇಲೆ ಇ.ಡಿ ತಂಡಗಳು ಏಕಕಾಲಕ್ಕೆ ಸಮರೋಪಾದಿ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿವೆ.
ಕಳೆದ ಜೂನ್‌ನಲ್ಲಿ ಸಚಿವರ ಆಪ್ತ ಸಂಬಂಧಿ ಹಾಗೂ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯಾಗಿದ್ದ ವೈ. ಮಂಜುನಾಥ್ ಅವರಿಗೆ ಸೇರಿದ ಆಸ್ತಿ-ಪಾಸ್ತಿಗಳ ಮೇಲೆ ಇ.ಡಿ ಬೃಹತ್ ಕಾರ್ಯಾಚರಣೆ ನಡೆಸಿತ್ತು. ಬೆಳಗಾವಿ ವಿಭಾಗದ ಅಬಕಾರಿ ಹೆಚ್ಚುವರಿ ಆಯುಕ್ತರಾಗಿದ್ದ ಮಂಜುನಾಥ್ ಅವರ ಬೆಂಗಳೂರು, ಬೆಳಗಾವಿ, ಮೈಸೂರು ಮತ್ತು ಅಥಣಿ ನಿವಾಸಗಳ ಮೇಲೆ ನಡೆದಿದ್ದ ಈ ದಾಳಿಯ ವೇಳೆ ಅಂದಾಜು ₹13.3 ಕೋಟಿ ಮೌಲ್ಯದ ಚಿನ್ನಾಭರಣ, ₹5.5 ಲಕ್ಷ ನಗದು ಹಾಗೂ ನೂರಾರು ಬೇನಾಮಿ ಬಾರ್ ಲೈಸೆನ್ಸ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಹಳೆಯ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ತನಿಖಾ ಸಂಸ್ಥೆ, ಇದೀಗ ನೇರವಾಗಿ ಸಚಿವರ ಬಾಗಿಲಿಗೆ ಬಂದು ನಿಂತಿದೆ. ಅಬಕಾರಿ ಇಲಾಖೆಯ ಲೈಸೆನ್ಸ್ ಅಕ್ರಮ, ಹವಾಲಾ ಹಣಕಾಸು ವ್ಯವಹಾರ ಹಾಗೂ ವಿದೇಶಿ ಅಕ್ರಮ ಬಂಡವಾಳ ಹೂಡಿಕೆಯ ಜಾಲ ಸಚಿವರಿಗೂ ತಲುಪಿದೆ ಎಂಬ ಬಲವಾದ ಶಂಕೆಯ ಆಧಾರದ ಮೇಲೆ ಈ ಶೋಧ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.
ಇಂದು ಮುಂಜಾನೆ ಎರಡು ಪ್ರತ್ಯೇಕ ವಾಹನಗಳಲ್ಲಿ ಸಚಿವರ ನಿವಾಸಕ್ಕೆ ಆಗಮಿಸಿದ ಅಧಿಕಾರಿಗಳ ತಂಡ, ತಕ್ಷಣವೇ ಶೋಧ ಆರಂಭಿಸಿದೆ. ಸದ್ಯ ಮನೆಯಲ್ಲಿರುವ ಪ್ರಮುಖ ಆಸ್ತಿಪತ್ರಗಳು, ಬ್ಯಾಂಕ್ ಖಾತೆಗಳ ದಾಖಲೆಗಳು ಹಾಗೂ ಹಣಕಾಸು ವಹಿವಾಟಿನ ಕಡತಗಳನ್ನು ಅಧಿಕಾರಿಗಳು ಜಾಲಾಡುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸಚಿವರ ನಿವಾಸದ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
