ದಕ್ಷಿಣ ಕನ್ನಡ

ಉಪ್ಪಿನಂಗಡಿ : ಉಪ್ಪಿನಂಗಡಿ ಪಂಚಾಯತ್‌ನಲ್ಲಿ ಪಿಡಿಒ ಆಡಳಿತಾತ್ಮಕ ಭಯೋತ್ಪಾದನೆ: ಲೋಕಾಯುಕ್ತ ತನಿಖೆ ವೇಳೆ ಭ್ರಷ್ಟಾಚಾರ ಬಯಲು – ಬಿಜೆಪಿ ಯುವಮೋರ್ಚಾ ಆರೋಪ

In-Shot-20260911-094216929

 

ಉಪ್ಪಿನಂಗಡಿ:

ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರ ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ಲೋಪಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಬಿಜೆಪಿ ಯುವಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ಆರೋಪಿಸಿದೆ.

​ಇತ್ತೀಚೆಗೆ (ಸೆಪ್ಟೆಂಬರ್ 9) ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಚೇರಿಗೆ ಕಡತಗಳ ಪರಿಶೀಲನೆಗಾಗಿ ಭೇಟಿ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ತಂಡದ ಎದುರು ಸಾರ್ವಜನಿಕರು ಪಿಡಿಒ ವಿರುದ್ಧ ಸಾಲು ಸಾಲು ದೂರುಗಳನ್ನು ಸಲ್ಲಿಸಿದ್ದಾರೆ. ಸಾರ್ವಜನಿಕರು ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಂಡರೂ ಬಾಗಿಲು ಸಂಖ್ಯೆ ನೀಡಲು ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ. ದಲ್ಲಾಳಿಗಳ ಮೂಲಕ ಲಕ್ಷಾಂತರ ರೂಪಾಯಿ ಹಣ ಕಬಳಿಸಲಾಗುತ್ತಿದೆ ಎಂದು ಗ್ರಾಮಸ್ಥರು ಲೋಕಾಯುಕ್ತರ ಮುಂದೆ ಅಳಲು ತೋಡಿಕೊಂಡಿದ್ದಾರೆ.

​ಅರ್ಜಿ ಸ್ವೀಕಾರಕ್ಕೂ ಪಿಡಿಒ ಒಪ್ಪಿಗೆ ಬೇಕು!

​ಸಾರ್ವಜನಿಕರು ನೀಡುವ ಯಾವುದೇ ಅರ್ಜಿ ಅಥವಾ ಮನವಿಗೆ ಸ್ವೀಕೃತಿ ಪತ್ರ ನೀಡಬೇಕಿರುವುದು ಪಂಚಾಯತ್‌ನ ಕರ್ತವ್ಯ. ಆದರೆ, ಪಿಡಿಒ ಒಪ್ಪಿಗೆ ನೀಡಿದರೆ ಮಾತ್ರ ಅರ್ಜಿ ಸ್ವೀಕರಿಸಬೇಕು ಎಂದು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂಬುದನ್ನು ಸ್ವತಃ ಪಂಚಾಯತ್ ಸಿಬ್ಬಂದಿಯೇ ಲೋಕಾಯುಕ್ತ ಅಧಿಕಾರಿಗಳ ಎದುರು ಒಪ್ಪಿಕೊಂಡಿದ್ದಾರೆ. ಇದು ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಅಣಕಿಸುವಂತಿದ್ದು, ಕಚೇರಿಯನ್ನು ಅಧಿಕಾರಿ ತಮ್ಮ ಸ್ವಂತ ಆಸ್ತಿಯಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಯುವಮೋರ್ಚಾ ಕಿಡಿಕಾರಿದೆ.

​ವರ್ಗಾವಣೆಯಾದರೂ ಮತ್ತೆ ಅದೇ ಪಂಚಾಯತ್‌ನಲ್ಲಿ ಪ್ರತ್ಯಕ್ಷ

​ಕಳೆದ 7 ವರ್ಷಗಳಿಂದ ಒಂದೇ ಪಂಚಾಯತ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಅಧಿಕಾರಿಯು ನಿಯಮಾವಳಿಗಳ ಪ್ರಕಾರ ವರ್ಗಾವಣೆಗೊಂಡಿದ್ದರೂ, ಪ್ರಭಾರ ನೆಲೆಯಲ್ಲಿ ಮತ್ತೆ ಉಪ್ಪಿನಂಗಡಿಯಲ್ಲೇ ಉಳಿದುಕೊಂಡಿದ್ದಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ ಪ್ರೋತ್ಸಾಹಕ ನೀತಿಯೇ ಇದಕ್ಕೆ ಕಾರಣ. "ಲಂಚ ಕೇಳಿದರೆ ನನಗೆ ತಿಳಿಸಿ" ಎಂದು ಹೇಳಿಕೆ ನೀಡುತ್ತಿದ್ದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಈ ಅಕ್ರಮಗಳು ಕಾಣಿಸುತ್ತಿಲ್ಲವೇ? ಸ್ವಪಕ್ಷದ ಕಾರ್ಯಕರ್ತರೇ ಮನವಿ ಸಲ್ಲಿಸಿದರೂ ಅಧಿಕಾರಿಯನ್ನು ಇಲ್ಲೇ ಉಳಿಸಿಕೊಳ್ಳಲು ಕಾರಣವಾದ ನಿಗೂಢ ಹಿತಾಸಕ್ತಿ ಏನು ಎಂದು ಪ್ರಶ್ನಿಸಲಾಗಿದೆ.

​ಜನರ ತೆರಿಗೆ ಹಣದಲ್ಲಿ ಕಚೇರಿ ಸೌಂದರ್ಯೀಕರಣ

​ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅಧಿಕ ಆದಾಯ ಹೊಂದಿರುವ ಉಪ್ಪಿನಂಗಡಿ ಪಂಚಾಯತ್‌ನ ಹಣವನ್ನು ಗ್ರಾಮದ ಅಭಿವೃದ್ಧಿಗೆ ಬಳಸುವ ಬದಲಾಗಿ, ಕಚೇರಿಯ ನವೀಕರಣ ಹಾಗೂ ಸುಖ-ಸೌಲಭ್ಯಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಯಾವ ನಿರ್ಣಯದ ಆಧಾರದಲ್ಲಿ ಜನತೆಯ ತೆರಿಗೆ ಹಣವನ್ನು ಕಚೇರಿ ಸೌಂದರ್ಯೀಕರಣಕ್ಕೆ ಬಳಸಲಾಗಿದೆ ಎಂಬುದಕ್ಕೆ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.

​ಉಗ್ರ ಪ್ರತಿಭಟನೆಯ ಎಚ್ಚರಿಕೆ

​ಶಾಸಕರು ಈ ಕೂಡಲೇ ಉಪ್ಪಿನಂಗಡಿ ಪಂಚಾಯತ್‌ನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಮೌನ ಮುರಿದು ಜನತೆಯ ಪ್ರಶ್ನೆಗಳಿಗೆ ಉತ್ತರಿಸಬೇಕು. ಇಲ್ಲವಾದಲ್ಲಿ ಭ್ರಷ್ಟಾಚಾರದ ವಿರುದ್ಧ ಮುಂದಿನ ದಿನಗಳಲ್ಲಿ ಶಾಸಕರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನ ರೂಪದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಯುವಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಶಿಶಿರ್ ಪೆರ್ವೊಡಿ ಎಚ್ಚರಿಸಿದ್ದಾರೆ.



image